ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದಲ್ಲಿ ರೇಖಾ ಚಿತ್ರ ಮೂವರು ಶಂಕಿತರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Gouri-Lankesh-Killers-02

ಬೆಂಗಳೂರು, ನ.12-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ಅಧಿಕಾರಿಗಳು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಎಸ್‍ಐಟಿ ಹಂತಕರ ಬೆನ್ನು ಬಿದ್ದಿದೆ. ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗಿದೆ.

ಅಲ್ಲದೇ, ಸಿ.ಸಿ. ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮೂವರು ಶಂಕಿತರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಗದಗದಲ್ಲಿ ಮೂವರು ಶಂಕಿತರ ಕುರಿತಾಗಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಎಸ್‍ಐಟಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿಗೆ ಮೂವರನ್ನು ಕರೆತಂದು ವಿಚಾರಣೆ ನಡೆಸಲಾಗಿದೆ. ಗೌರಿ ಲಂಕೇಶ್ ಹತ್ಯೆಯಲ್ಲಿ ಈ ಮೂವರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗಿದೆ ಎನ್ನಲಾಗಿದೆ. ಅವರ ಹತ್ಯೆಯಾಗಿ ತಿಂಗಳಾದರೂ, ಹಂತಕರ ಸುಳಿವು ಸಿಕ್ಕಿಲ್ಲ. ನಿರಂತರವಾಗಿ ಹಂತಕರ ಪತ್ತೆಗೆ ಎಸ್‍ಐಟಿ ತನಿಖೆ ನಡೆಸುತ್ತಿದ್ದು, ಹಲವು ಮಾಹಿತಿ ಕಲೆ ಹಾಕಿದೆ.

ಸೆಪ್ಟಂಬರ್ 5 ರಿಂದಲೂ ತನಿಖೆ ನಡೆಯುತ್ತಿದ್ದು, ಹಗಲು, ರಾತ್ರಿ ತನಿಖಾ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ. 61 ಅಧಿಕಾರಿಗಳು, ಸಿಬ್ಬಂದಿ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 600 ಸಿ.ಸಿ. ಟಿ.ವಿ. ಡಿವಿಆರ್‍ಗಳನ್ನು ಪರಿಶೀಲನೆ ನಡೆಸಲಾಗಿದೆ. 2000 ಗಂಟೆಗೂ ಅಧಿಕ ಕಾಲದ ಫುಟೇಜ್ ವೀಕ್ಷಿಸಲಾಗಿದೆ. 1 ಕೋಟಿಗೂ ಅಧಿಕ ಕಾಲ್ ಡಿಟೇಲ್ ಪಡೆದುಕೊಂಡಿದ್ದಾರೆ. ಅಲ್ಲದೇ 500ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸಿದ್ದಾರೆ. ಹಂತಕರು ರೆಡ್ ಪಲ್ಸರ್ ಬಳಸಿದ್ದರೆನ್ನಲಾಗಿದ್ದು, ತನಿಖಾ ತಂಡದಿಂದ ಇಂತಹ 8000 ಬೈಕ್ ಪರಿಶೀಲಿಸಲಾಗಿದೆ. ಹತ್ಯೆಗೆ ಬಳಸಲಾಗಿದೆ ಎನ್ನಲಾಗಿರುವ ವೆಪನï ಮೂಲದ ಶೋಧವನ್ನು ತಡಕಾಡಲಾಗಿದೆ. ಗೌರಿ ಲಂಕೇಶ್ ಹಂತಕರ ಮಹತ್ವದ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವರು ಹೇಳಿದ್ದರಾದರೂ, ತನಿಖೆ ಇನ್ನೂ ಮುಂದುವರೆದಿದೆ.

ಎಸ್‍ಐಟಿ ಕೈಗೊಂಡ ನಿರಂತರ ಶೋಧ ಕಾರ್ಯದ ಬಳಿಕ, ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆಯಾಗಿದೆ ಎನ್ನಲಾಗಿದೆ.ಗೌರಿ ಲಂಕೇಶ್ ಅವರನ್ನು ಹತ್ಯೆಗೈದವರು ವೃತ್ತಿಪರ ಹಂತಕರಾಗಿದ್ದು, ಪಾತಕಿಗಳು ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲಿ ವಾಸ್ತವ್ಯವನ್ನು ಬದಲಿಸುತ್ತಿರುವುದು ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಗೌರಿ ಲಂಕೇಶ್ ಅವರನ್ನು ಕೊಂದ ಹಂತಕರು ಯಾವುದೇ ಸಂಘಟನೆಗೆ ಸೇರಿದವರಾಗಿಲ್ಲ. ಆದರೆ, ಪ್ರಮುಖ ಸಂಘಟನೆಯೊಂದು ಅವರನ್ನು ರಕ್ಷಿಸುತ್ತಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಗೊತ್ತಾಗಿದೆ.

ಹಂತಕರು ಭೀಕರವಾದ ಇತಿಹಾಸ ಹೊಂದಿದ್ದು, ದೇಶದ ವಿವಿಧೆಡೆ ಸುಮಾರು 25 ಸುಪಾರಿ ಹತ್ಯೆ ಮಾಡಿದ್ದಾರೆ. ಇವರಿಗೆ ಫಾರಿನ್ ಲಿಂಕ್ ಕೂಡ ಇದೆ ಎನ್ನಲಾಗಿದೆ. ಹಂತಕ ಜಾಡು ಆಧರಿಸಿ ತನಿಖಾ ತಂಡ ತನಿಖೆಯನ್ನು ತೀವ್ರಗೊಳಿಸಿದೆ. ಹಂತಕರು ನಿರಂತರವಾಗಿ ವಾಸ್ತವ್ಯ ಬದಲಿಸುತ್ತಿದ್ದಾರೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಗೊತ್ತಾಗಿದೆ ಎಂದು ಹೇಳಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin