‘ರೌಡಿಗಳನ್ನು ಗಡಿಪಾರು ಮಾಡಿ, ಮಾದಕ ವಸ್ತು ದಂಧೆ ಮೇಲೆ ನಿಗಾ ಇಡಿ’

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy---02

ಬೆಂಗಳೂರು, ನ.12- ರೌಡಿಗಳು, ಸಮಾಜಘಾತುಕ ಶಕ್ತಿಗಳು, ಪುಂಡಾಟಿಕೆ ನಡೆಸಿ ಸಮಾಜದಲ್ಲಿ ಶಾಂತಿ ಕದಡುವವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಗಡಿಪಾರು ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಪದೇ ಪದೇ ಅಶಾಂತಿ ಉಂಟುಮಾಡುವವರ ಮೇಲೆ ವಿಶೇಷ ಗಮನ ಹರಿಸಬೇಕೆಂದು ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದೆ. ರೌಡಿಗಳು ಇರಬೇಕೋ, ಇಲ್ಲವೇ ನೀವು (ಪೊಲೀಸರು)ಇರಬೇಕೋ ಎಂಬುದನ್ನು ನೀವೇ ತೀರ್ಮಾನಿಸಬೇಕೆಂದು ಹೇಳಿದ್ದೇನೆ. ಎಷ್ಟೇ ಪ್ರಭಾವಿಗ ಳಾಗಲಿ ಯಾವುದಕ್ಕೂ ಮಣಿಯದಂತೆ ಕೆಲಸ ಮಾಡುವಂತೆ ತಾಕೀತು ಮಾಡಿರುವುದಾಗಿ ಹೇಳಿದರು.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಾನು ನೋಡುವುದಕ್ಕೆ ಮೃದುವಾಗಿ ಕಾಣಬಹುದು. ಆದರೆ, ನನ್ನ ನಿರ್ಧಾರಗಳು ಮಾತ್ರ ಅತ್ಯಂತ ಕಠಿಣವಾಗಿರುತ್ತವೆ. ಇಲಾಖೆ ವಿಷಯದಲ್ಲೂ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂದರು. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿದರೆ ಪೊಲೀಸರು ಬೇರೆ ರಾಜ್ಯಗಳಿಗಿಂತ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಮಂಗಳೂರಿನಲ್ಲಿ ಮಾತ್ರ ಒಂದಿಷ್ಟು ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಮೈಸೂರು, ಬೆಂಗಳೂರು, ಶಿವಮೊಗ್ಗ ಮತ್ತಿತರ ಕಡೆ ಬೈಕ್ ರ್ಯಾಲಿ ನಡೆಸಲು ಮುಂದಾದರು. ಆದರೆ, ರ್ಯಾಲಿ ನಡೆಸಿದರೆ ಅಶಾಂತಿ ಉಂಟಾಗುತ್ತದೆ ಎಂಬುದನ್ನು ಅರಿತುಕೊಂಡೇ ನಾವು ಅನುಮತಿ ನೀಡಲಿಲ್ಲ. ಇದರಿಂದ ಉಂಟಾಗಬಹುದಾದ ಗಲಭೆಯನ್ನು ತಪ್ಪಿಸಿದ್ದೇವೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಹರಿಯಾಣದಲ್ಲಿ ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಬಾಯಿಸದ ಕಾರಣ 37 ಮಂದಿ ಸಾವನ್ನಪ್ಪಿದರು. ರಾಜ್ಯದಲ್ಲೂ ಕೂಡ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣಕ್ಕಾಗಿ ನಾವು ಕೆಲವು ಸಂದರ್ಭಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಇದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಎಂದು ಹೇಳಿದರು.
ಬಿಜೆಪಿಯವರು ರಾಜಕಾರಣಕ್ಕಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸಿದರು. ನಮ್ಮ ಸರ್ಕಾರ ಕೇವಲ ಟಿಪ್ಪು ಜಯಂತಿ ಮಾತ್ರ ಆಚರಣೆ ಮಾಡುತ್ತಿಲ್ಲ. 26 ಜಯಂತಿಗಳನ್ನು ಆಚರಿಸುತ್ತಿದೆ. ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಟಿಪ್ಪುವನ್ನು ಕೊಂಡಾಡಿದ್ದರು. ಜಗದೀಶ್‍ಶೆಟ್ಟರ್, ಡಿ.ವಿ.ಸದಾನಂದಗೌಡ, ಆರ್.ಅಶೋಕ್ ಸೇರಿದಂತೆ ಅನೇಕರು ಅವರ ಪುಸ್ತಕಕ್ಕೆ ಮುನ್ನುಡಿ ಬರೆದರು. ಈಗ ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕಠಿಣ ಕ್ರಮ ಅನಿವಾರ್ಯ:

ಶಾಲಾ-ಕಾಲೇಜು ಸೇರಿದಂತೆ ಮತ್ತಿತರ ಕಡೆ ಗಾಂಜಾ, ಅಫೀಮು, ಕೊಕೈನ್ ಸೇರಿದಂತೆ ಯಾವುದೇ ರೀತಿಯ ಮಾದÀಕ ವಸ್ತುಗಳನ್ನು ಮಾರಾಟ ಮಾಡದಂತೆ ತಡೆಯಲು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಇದನ್ನು ಸೇವಿಸಿ ಸಿಕ್ಕಿ ಬಿದ್ದವರ ಪೊೀಷಕರನ್ನು ಠಾಣೆಗೆ ಕರೆಸಿ ಬುದ್ದಿ ಹೇಳುವಂತೆ ಪೊಲೀಸರಿಗೆ ಸಲಹೆ ನೀಡಿದ್ದೇನೆ ಎಂದರು. ಕೆಲವು ವಿದೇಶಿ ವಿದ್ಯಾರ್ಥಿಗಳು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬರುತ್ತಿದೆ. ವೀಸಾ ಅವಧಿ ಮುಗಿದು ಕರ್ನಾಟಕದಲ್ಲಿ ಉಳಿದಿದ್ದರೆ ಅವರನ್ನು ಗಡಿ ಪಾರು ಮಾಡುವುದು, ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರೆ ವೀಸಾ ರದ್ದು ಮಾಡುವಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಗೂ ಈಗಾಗಲೇ ಸೂಚನೆ ಕೊಟ್ಟಿರುವುದಾಗಿ ವಿವರಿಸಿದರು.

ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಯಾರು ಇಂತಹ ಚಟುವಟಿಕೆ ನಡೆಸುತ್ತಾರೋ ಅಂಥವರಿಗೆ ಶಿಕ್ಷೆ ವಿಧಿಸಲು ವಿಶೇಷ ಕಾನೂನು ಇದೆ. ಜತೆಗೆ ವಿದ್ಯಾರ್ಥಿನಿಯರನ್ನ ಚುಡಾಯಿಸುವುದನ್ನು ತಡೆಗಟ್ಟಲು ಶಾಲಾ-ಕಾಲೇಜಿನಲ್ಲಿ ಹೆಚ್ಚಿನ ಹೊಯ್ಸಳ ಹಾಗೂ ಗಸ್ತು ವಾಹನಗಳನ್ನು ಹೆಚ್ಚಳ ಮಾಡಲಾಗಿದೆ ಎಂದರು. ಗೃಹ ಇಲಾಖೆಯಲ್ಲಿ ಒಂದು ಲಕ್ಷ ಸಿಬ್ಬಂದಿಯ ಕೊರತೆ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 24,500 ಸಿಬ್ಬದಿಯನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಕಾಲ ಕಾಲಕ್ಕೆ ಸಿಬ್ಬಂದಿಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಷ್ಟೊಂದು ಸಮಸ್ಯೆ ಇಲ್ಲ. ಗೃಹ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲು 30 ಅಂಶಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಗೃಹ ಸಚಿವರು ತಿಳಿಸಿದರು.

ಸಿಎಂ ಜತೆ ಚರ್ಚೆ:

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಮೊದಲು ನಮಗೆ ರಸ್ತೆ ಅಗಲೀಕರಣ ಮಾಡಲು ಟಿಡಿಆರ್ ಸಮಸ್ಯೆ ಇತ್ತು. ಈಗ ಯಾವುದೇ ರೀತಿಯ ಕಾನೂನು ತೊಡಕು ಇಲ್ಲದೇ ಇರುವುದರಿಂದ ಮೊದಲ ಹಂತವಾಗಿ ಹೆಣ್ಣೂರು, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ಕೋರಮಂಗಲ, ಬೊಮ್ಮನಹಳ್ಳಿ ಸೇರಿದಂತೆ ಮತ್ತಿತರ ಕಡೆ ರಸ್ತೆ ಅಗಲೀಕರಣ ಮಾಡುವುದಾಗಿ ತಿಳಿಸಿದರು. ಎಸ್.ಎಂ.ಕೃಷ್ಣ ನಂತರ ಬೆಂಗಳೂರು ರಸ್ತೆ ಅಗಲೀಕರಣಕ್ಕೆ ಯಾರೊಬ್ಬರೂ ಹೆಚ್ಚು ಗಮನ ಹರಿಸಲಿಲ್ಲ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನಂತರ ರಾಜಶೇಖರರೆಡ್ಡಿ ಸೇರಿದಂತೆ ಮತ್ತಿತರರು ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿದರು.

ಇಂದು ನಗರದಲ್ಲಿ 40 ಲಕ್ಷ ದ್ವಿಚಕ್ರ ವಾಹನಗಳು ಸೇರಿದಂತ ಒಂದು ಕೋಟಿ ಜನಸಂಖ್ಯೆ ಇದೆ. ದೆಹಲಿಯಲ್ಲಿ ಸಮ-ಬೆಸ ಯೋಜನೆಯನ್ನು ಅನುಷ್ಠಾನ ಮಾಡಿದಂತೆ ಬೆಂಗಳೂರಿನಲ್ಲೂ ಮಾಡುವ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು. ನಂತರ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ವಾಹನಗಳ ಮೇಲೆ ವಿಶೇಷ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ನೋಂದಾವಣೆ ಸಂಖ್ಯೆ ಹೊರತುಪಡಿಸಿ ಫಲಕದ ಮೇಲೆ ಯಾವುದೇ ರೀತಿಯ ಸಂಖ್ಯೆಗಳು ಇದ್ದರೆ ಕಿತ್ತು ಹಾಕುವಂತೆ ಸೂಚಿಸಲಾಗಿದೆ. ಪ್ರೆಸ್ ಎಂದು ನಾಮ ಫಲಕ ವಿದ್ದರೂ ಅವುಗಳನ್ನೂ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ. ಇದರಲ್ಲಿ ನಕಲಿ ಎಂಬುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ರಾಮಲಿಂಗಾರೆಡ್ಡಿ ಎಚ್ಚರಿಸಿದರು. ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ದೊಡ್ಡ ಬೊಮ್ಮಯ್ಯ, ಖಜಾಂಚಿ ಬಿ.ಎನ್.ರಮೇಶ್ ಹಾಜರಿದ್ದರು.

Facebook Comments

Sri Raghav

Admin