ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಸುವರ್ಣಸೌಧಕ್ಕೆ ರೈತರ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-0003

ಬೆಂಗಳೂರು, ನ.12-ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಾಳೆ ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ರೈತರ ಸಾಲಮನ್ನಾ , ಕಬ್ಬು ಬೆಲೆ ನಿಗದಿ, ರೈತರ ಬೆಳೆಗಳಿಗೆ ಕನಿಷ್ಟ ಬೆಲೆ ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಸಾವಿರಾರು ಕಾರ್ಯಕರ್ತರು ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಸುವರ್ಣಸೌಧ ಮುತ್ತಿಗೆ ಹಾಕಲಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಸಂಜೆಗೆ ತಿಳಿಸಿದರು.

ಇಂದು ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಜಿಲ್ಲೆಯ ನಂದಗಡದಿಂದ ಪಾದಯಾತ್ರೆ ಮೂಲಕ ಸುವರ್ಣ ಸೌಧಕ್ಕೆ ತೆರಳಲಿದ್ದೇವೆ ಎಂದು ತಿಳಿಸಿದರು.
ಸತತ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ರಾಜ್ಯ ಸರ್ಕಾರ ಕೇವಲ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ. ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.  ಅಲ್ಲದೆ ಪ್ರತಿ ಟನ್‍ಗೆ 3,500 ರೂ. ನಿಗದಿ ಮಾಡಬೇಕೆಂದು ಈಗಾಗಲೇ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿಲ್ಲ. ರೈತರು ಸಾಲಸೋಲ ಮಾಡಿ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಸರ್ಕಾರ ಮಾರುಕಟ್ಟೆ ದರ ನಿಗದಿ ಮಾಡಬೇಕು. ಬೆಲೆ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಕಷ್ಟು ಹೋರಾಟಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾಳೆ ಸಾವಿರಾರು ರೈತರೊಂದಿಗೆ ಸುವರ್ಣಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.

Facebook Comments

Sri Raghav

Admin