ಅಧಿವೇಶನದಲ್ಲಿ ಧರ್ಮಸಿಂಗ್, ಖಮರುಲ್ಲಾ, ಗೌರಿಲಂಕೇಶ್ ಸೇರಿದಂತೆ 14 ಮಂದಿಗೆ ಭಾವಪುರ್ಣ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Session-Parishat--01

ಬೆಳಗಾವಿ(ಸುವರ್ಣಸೌಧ), ನ.13- ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಹಾಲಿ ಶಾಸಕರಾದ ಖಮರುಲ್ಲಾ ಇಸ್ಲಾಂ, ಚಿಕ್ಕಮಾದು, ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಪತ್ರಕರ್ತೆ ಗೌರಿಲಂಕೇಶ್ ಸೇರಿದಂತೆ 14 ಮಂದಿಗೆ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ ಭಾವಪುರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಮೊದಲ ದಿನವಾದ ಇಂದು ಆರಂಭದಲ್ಲಿ ಸಭಾಧ್ಯಕ್ಷ ಕೋಳಿವಾಡ ಅವರು ವಿಧಾನಸಭೆಯಲ್ಲಿ ಹಾಗೂ ವಿಧಾನಪರಿಷತ್‍ನಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಹಾಲಿ ಶಾಸಕರಾಗಿದ್ದ ಖಮರುಲ್ಲಾ ಇಸ್ಲಾಂ, ವಿಧಾನಪರಿಷತ್ ಸದಸ್ಯರಾಗಿದ್ದ ಎಸ್.ಚಿಕ್ಕಮಾದು, ಮಾಜಿ ಸಚಿವ ಪೋತದಾರ ರಾಮಭಾವು ಭೀಮರಾವ್, ಮಾಜಿ ಶಾಸಕರಾದ ವಿದ್ಯಾಧರ ಗುರೂಜಿ, ಸಿದ್ದನಗೌಡ ಸೋಮನಗೌಡ ಪಾಟೀಲ್, ಬಿ.ಬಿ.ಶಿವಪ್ಪ, ಜಯಪ್ರಕಾಶ ಶೆಟ್ಟಿ ಕೊಳ್ಕೆಬಯಲು, ಬಿ.ಜಿ.ಕೊಟ್ರಪ್ಪ, ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಪತ್ರಕರ್ತೆ ಗೌರಿಲಂಕೇಶ್, ಖಾದ್ರಿ ಎಸ್.ಅಚ್ಚುತನ್ ಅವರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಸಂತಾಪ ಸೂಚಕ ಮಂಡಿಸಿದರು.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು 1936ರ ಡಿ.23ರಂದು ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನೀಲೋಗಿ ಗ್ರಾಮದಲ್ಲಿ ಜನಿಸಿದರು. ಎಂಎ, ಎಲ್‍ಎಲ್‍ಬಿ ಪದವಿ ಪಡೆದು ವಕೀಲರಾಗಿದ್ದರು. 5ರಿಂದ 12ರವರೆಗೆ ಒಟ್ಟು 8 ಬಾರಿ ವಿಧಾನಸಭೆಯ ಶಾಸಕರಾಗಿ ಜೀವರ್ಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ನಗರಾಭಿವೃದ್ಧಿ, ಗೃಹ, ಸಮಾಜ ಕಲ್ಯಾಣ, ಕಂದಾಯ, ಲೋಕೋಪಯೋಗಿ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಎರಡು ಬಾರಿ ಲೋಕಸಭೆ ಸದಸ್ಯರಾಗಿದ್ದರು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕಲಬುರ್ಗಿಗೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಯಿತು. ಜನಸೇವೆಗೆ ಹೆಸರಾಗಿದ್ದ ಇವರನ್ನು ಆ ಭಾಗದ ಜನ ಧರ್ಮರಾಜ ಎಂದು ಕರೆಯುತ್ತಿದ್ದರು. ಕಳೆದ ಜು.27ರಂದು ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೋಳಿವಾಡ ಹೇಳಿದರು.

ಖಮರುಲ್ಲ ಇಸ್ಲಾಂ ಅವರು 1948 ಜ.27ರಂದು ಕಲ್ಬುರ್ಗಿ ಜಿಲ್ಲೆಯಲ್ಲಿ ಜನಿಸಿದ್ದ ಇವರು ಬಿಇ ಮೆಕ್ಯಾನಿಕಲ್ ಪದವೀಧರರಾಗಿದ್ದ ಅವರು ಶಿಕ್ಷಣ ತಜ್ಞ, ಸಾಮಾಜಿಕ ಕಾರ್ಯಕರ್ತರಾಗಿದ್ದರು. ಒಂದು ಬಾರಿ ಲೋಕಸಭೆ ಸದಸ್ಯರಾಗಿ, 6,9,10,11,13,14ರ ವಿಧನಾಸಭೆಗೆ ಒಟ್ಟು ಆರು ಬಾರಿ ಕಲಬುರ್ಗಿ ಉತ್ತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವಸತಿ, ಕಾರ್ಮಿಕ, ಸಣ್ಣ ಕೈಗಾರಿಕೆ, ಹಜ್, ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಸಚಿವರಾಗಿದ್ದರು. ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ಗೃಹ ಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿ, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕಳೆದ ಸೆ.18ರಂದು ಅಕಾಲಿಕ ಸಾವಿಗೀಡಾದರು ಎಂದು ವಿಷಾದಿಸಿದರು.
ಹಾಲಿ ಶಾಸಕರಾದ ಚಿಕ್ಕಮಾದು 1951ರ ಮಾ.7ರಂದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಹೊಸೂರು ಕಲ್ಲಹಳ್ಳಿ ಗ್ರಾಮದಲ್ಲಿ ಜನಿಸಿದರು. ಬಿಎಸ್ಸಿ, ಎಲ್‍ಎಲ್‍ಬಿ ಪದವೀಧರರಾಗಿದ್ದ ಅವರು, 9ನೇ ವಿಧಾನಸಭೆಗೆ ಹುಣಸೂರು ಕ್ಷೇತ್ರದಿಂದ 14ನೇ ವಿಧಾನಸಭೆಗೆ ಹೆಗ್ಗಡನದೇವಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2006ರಿಂದ 12ರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ವಾಲ್ಮೀಕಿ ಸಮಾಜದ ಮುಂಚೂಣಿ ನಾಯಕರಾಗಿದ್ದ ಇವರು ನ.1ರಂದು ನಿಧನರಾದರು ಎಂದರು.

ಮಾಜಿ ಸಚಿವ ಹೊತೆದಾರರಾಮರಾವ್ ಭೀಮರಾವ್ 1924ರ ಅಕ್ಟೋಬರ್‍ನಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಜನಿಸಿದರು. 1983ರಿಂದ 86ರವರೆಗೆ ಮೂರು ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿ, ಕೈಗಾರಿಕೆ ಮತ್ತು ಸಹಕಾರ ಸಚಿವರಾಗಿ ಕೆಲಸ ಮಾಡಿದರು. ಬೆಳಗಾವಿ ನಗರಸಭೆ ಸದಸ್ಯರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಬೆಳಗಾವಿ ಪಯೋನಿಯರ್ ಬ್ಯಾಂಕ್‍ನ ಸ್ಥಾಪಕ ಸದಸ್ಯರಾಗಿ ಕೆಲಸ ಮಾಡಿದ್ದ ಇವರು ವಿಧಾನಪರಿಷತ್‍ನ ಸಭಾಪತಿಯಾಗಿಯೂ ಕೆಲಸ ಮಾಡಿದ್ದಾರೆ ಎಂದರು.
ಮಾಜಿ ಶಾಸಕ ವಿದ್ಯಾಧರ ಗುರೂಜಿ ಅವರು, 1914ರ ಡಿ.30ರಂದು ಗುಲ್ಬರ್ಗ ಜಿಲ್ಲೆ ಯಾದಗಿರಿ ತಾಲ್ಲೂಕು ಗುರುಮಿಟ್ಕಲ್ ಗ್ರಾಮದಲ್ಲಿ ಜನಿಸಿದರು. 3ನೇ ವಿಧಾನಸಭೆಗೆ ಗುರುಮಿಟ್ಕಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1988-94ರ ಅವಧಿಯಲ್ಲಿ ವಿಧಾನಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದರು.
ಹೈದರಾಬಾದ್‍ನ ಹಿಂದಿ ಪ್ರಚಾರ ಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಇವರು ಕಳೆದ ಜು.29ರಂದು ನಿಧನರಾದರು.

ಮಾಜಿ ಶಾಸಕ ಸಿದ್ದನಗೌಡ ಸೋಮನಗೌಡ ಪಾಟೀಲ್ 1928ರ ಜು.9ರಂದು ಜನಿಸಿದರು. ಬಿಎ ಪದವೀಧರರಾದ ಇವರು ಪೆÇಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದರು. 6 ಮತ್ತು 7ನೇ ವಿಧಾನಸಭೆಗೆ ಬೀಳಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ, ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಜು.9ರಂದು ನಿಧರಾದರು ಎಂದರು. ಮಾಜಿ ಶಾಸಕ ಬಿ.ಬಿ.ಶಿವಪ್ಪ ಅವರು, 1929ರ ಸೆ.27ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಬೇಳೂರು ಗ್ರಾಮದಲ್ಲಿ ಜನಿಸಿದರು. 10 ಮತ್ತು 11ನೇ ವಿಧಾನಸಭೆಗೆ ಸಕಲೇಶಪುರದಿಂದ ಆಯ್ಕೆಯಾಗಿದ್ದರು. 1984ರಿಂದ 90, 2013-14ರವರೆಗೆ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು. ಕಾವೇರಿ ಸಿಮೆಂಟ್ಸ್ ಲಿಮಿಟೆಡ್ ಅಧ್ಯಕ್ಷರಾಗಿ, ಗುಲ್ಬರ್ಗ ಇಂಜಿನಿಯರ್ ಕಾಲೇಜಿನ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು ಜು.31ರಂದು ನಿಧನರಾದರು.

ಮಾಜಿ ಶಾಸಕ ಜಯಪ್ರಕಾಶ ಶೆಟ್ಟಿ ಕೊಳ್ಕೆಬಯಲು 1938ರ ಮೇ 15ರಂದು ಕೊಳ್ಕೆಬಯಲು ಗ್ರಾಮದಲ್ಲಿ ಜನಿಸಿದರು. ಎಲ್‍ಎಲ್‍ಬಿ ಪದವೀಧರರಾದ ಇವರು 5ನೇ ವಿಧಾನಸಭೆಗೆ ಭ್ರಹ್ಮವಾರ ಕ್ಷೇತ್ರದಿಂದ ಆಯ್ಕೆಯಾದರು. ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸಿದರು. ಹಿರಿಯ ಸ್ವಾತಂತ್ರ ಹೋರಾಟಗಾರರದ ಮಾಜಿ ಶಾಸಕ ಬಿ.ಜಿ.ಕೊಟ್ರಪ್ಪ 1927ರ ಫೆ.10ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಬಿಳಸನೂರು ಗ್ರಾಮದಲ್ಲಿ ಜನಿಸಿದರು. ಎಲ್‍ಎಲ್‍ಬಿ ಪದವೀಧರರಾಗಿದ್ದ ಇವರು 8ನೇ ವಿಧಾನಸಭೆಗೆ ಹರಿಹರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಐದು ತಿಂಗಳ ಕಾಲ ಸೆರವಾಸ ಅನುಭವಿಸಿದರು. ನಗರ ಯೋಜನಾ ಪ್ರಾಧಿಕರದ ಅಧ್ಯಕ್ಷರಾಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರು 1932 ಮಾ.10ರಂದು ಉಡುಪಿ ಜಿಲ್ಲೆ ಆದಮಾರು ಗ್ರಾಮದಲ್ಲಿ ಜನಿಸಿದರು. ಪಿಎಚ್‍ಡಿ ಪದವೀಧರರಾದ ಇವರು ಸಂಶೋಧಕರಾಗಿ, ಉಪನ್ಯಾಸಕರಾಗಿ, ಕೇಂದ್ರ ಸರ್ಕಾರದ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಧ್ಯಕ್ಷರಾಗಿ 10 ವರ್ಷ ಸೇವೆ ಸಲ್ಲಿಸಿದರು. ಭಾರತದ ಮೊಟ್ಟ ಮೊದಲ ಆರ್ಯಭಟ ಉಪಗ್ರಹ ಅಭಿವೃದ್ಧಿ ಪಡಿಸಿ ಯಶಸ್ವಿ ಉಡಾವಣೆ ಮಾಡಿದರು. ಇತ್ತೀಚಿನ ಮಂಗಳಯಾನದವರೆಗೂ ಬಾಹ್ಯಾಕಾಶ ಸಾಧನೆಗೆ ಗಣನೀಯ ಕೊಡುಗೆ ನೀಡಿದರು.

ಭಾಸ್ಕರ್, ಆ್ಯಪ್, ರೋಹಿಣಿ, ಇನ್‍ಸಾಟ್-1 , ಇನ್‍ಸಾಟ್-2 ಸರಣಿಯ ವಿವಿಧೋದ್ದೇಶ ಉಪಗ್ರಹ ಐಆರ್‍ಎಸ್-1, ಐಆರ್‍ಎಸ್-1ಬಯಂತಹ ಸೂಕ್ಷ್ಮ ಗ್ರಾಹಿ ಉಪಗ್ರಹಗಳು ಸೇರಿ 18 ಪ್ರಮುಖ ಉಪಗ್ರಹಗಳು ಯು.ಆರ್.ರಾವ್ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿದ್ದವು. ನಾಸಾ ಸಂಸ್ಥೆಯ ಸಮೂಹ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ, ಸ್ಯಾಟ್‍ಲೈಟ್ ಹಾಲ್‍ಆಫ್, ಫೇಮ್ ಪ್ರಶಸ್ತಿ, ಹಂಪಿ ಕನ್ನಡ ವಿವಿಯ ನಾಡೋಜ ಪ್ರಶಸ್ತಿ ಸೇರಿದಂತೆ ವಿದೇಶಿ ವಿವಿಗಳಿಂದ ಡಿಎಸ್‍ಸಿ ಗೌರವ ಪ್ರಶಸ್ತಿ, 10ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದುಕೊಂಡರು. ಇವರ 350ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿದ್ದವು. ಜುಲೈ 24ರಂದು ರಾವ್ ನಮ್ಮನ್ನೆಲ್ಲಾ ಅಗಲಿದರು ಎಂದರು.
ಯಕ್ಷಗಾನ ಕಲಾವಿದ ಚಿತ್ತಾಣಿ ರಾಮಚಂದ್ರ ಹೆಗಡೆ ಅವರು, 1933ರ ಸೆ.18ರಂದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಚಿತ್ತಾಣಿಯಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲಿ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಚಂದ್ರಹಾಸಚರಿತ್ರೆಯ ದುಷ್ಟಬುದ್ದಿ, ಕವಿರತ್ನ ಕಾಳಿದಾಸನ ಕುಮುದಪ್ರಿಯ, ಗದಾಯುದ್ಧದ ಕೌರವ, ಮೋಹಿನಿ ಭಸ್ಮಾಸುರದ ಭಸ್ಮಾಸುರ, ಭೀಷ್ಮ ವಿಜಯದ ಸಾಳ್ವ ಸೇರಿದಂತೆ ಅನೇಕ ಪಾತ್ರಗಳಲ್ಲಿ ತಮ್ಮದೇ ಶೈಲಿ ರೂಢಿಸಿಕೊಂಡು ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದ್ದರು. ಅ.3ರಂದು ಕಲೆಯ ನಂಟನ್ನು ಕಳಚಿಕೊಂಡು ಇಹಲೋಕ ತ್ಯಜಿಸಿದರು.

ಹಿರಿಯ ರಂಗಭೂಮಿ ಕಲಾವಿದ ಹೇಣಗಿ ಬಾಳಪ್ಪ 1914ರಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದಲ್ಲಿ ಜನಿಸಿದರು. ನಟನೆಯಲ್ಲಿ ಹೆಚ್ಚು ಒಲವು ಹೊಂದಿದ್ದರು. ನಡೆದಾಡುವ ರಂಗಭೂಮಿ ಎಂದೇ ಹೆಸರು ಪಡೆದಿದ್ದರು. ನಟರಾಗಿ, ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದರು. 432ಕ್ಕೂ ಅಧಿಕ ನಾಟಕಗಳು, 123 ಚಲನಚಿತ್ರಗಳಲ್ಲಿ ನಟಿಸಿದ್ದರು. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು. ಆ.8ರಂದು ನಿಧನರಾದರು. ಹಿರಿಯ ಪತ್ರಕರ್ತೆ ಗೌರಿಲಂಕೇಶ್ 1962ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‍ಸ್ಟಿಟ್ಯೂಟ್ ಮಾಸ್ ಕಮೀಷನ್ ಪದವೀಧರರಾಗಿದ್ದರು. 32 ವರ್ಷಗಳ ಕಾಲ ವರದಿಗಾರರ ವೃತ್ತಿಯಲ್ಲಿ 20 ವರ್ಷ ದೆಹಲಿಯಲ್ಲೇ ಕಳೆದರು. ಜಾತಿ ವ್ಯವಸ್ಥೆ ಹಾಗೂ ಪ್ರಭುತ್ವದ ವಿರುದ್ಧ ನಿರ್ಭಿತ ದನಿಯಾಗಿದ್ದರು. ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರಲು ಶ್ರಮಿಸಿದರು.

ಮಿಡ್ ಡೆ, ಸಂಡೆ, ನಿಯತಕಾಲಿಕೆಗಳು, ಈಟಿವಿ, ನ್ಯೂಸ್ ಟೈಮ್, ಹೆಡ್‍ಲೈನ್ಸ್ ಟುಡೆ, ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಗಾರರಾಗಿ ಕೆಲಸ ಮಾಡಿದರು. ಗೌರಿ ಲಂಕೇಶ್ ಅವರ ಅನಿರೀಕ್ಷಿತ ಮರಣ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ ಎಂದು ಸ್ಪೀಕರ್ ವಿಷಾದಿಸಿದರು. ಮತ್ತೊಬ್ಬ ಪತ್ರಕರ್ತ ಖಾದ್ರಿ ಎಸ್.ಅಚ್ಚುತನ್ ಅವರು 1945 ಜ.18ರಂದು ಮಂಡ್ಯ ಜಿಲ್ಲಾ ಮೇಲುಕೋಟೆಯಲ್ಲಿ ಜನಿಸಿದರು. ಸಂಯುಕ್ತ ಕರ್ನಾಟಕ ಸೇರಿದಂತೆ ಹಲವಾರು ಪತ್ರೆಕೆಗಳಲ್ಲಿ ಕೆಲಸ ಮಾಡಿ ಆಕಾಶವಾಣಿ, ದೂರದರ್ಶನದಲ್ಲಿ ಸುದ್ದಿ ಸಂಪಾದಕರಾಗಿ, ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿಯಾಗಿ ಕೆಲಸ ಮಾಡಿದರು. ಹಲವಾರು ಕೃತಿಗಳನ್ನು ರಚಿಸಿದರು. ಅ.29ರಂದು ನಿಧನರಾದರು ಎಂದು ಸಂತಾಪದ ನಿರ್ಣಯವನ್ನು ಕೋಳಿವಾಡ ಓದಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಈ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ ಕೊನೆಗೆ ಒಂದು ನಿಮಿಷಗಳ ಮೌನ ಶ್ರದ್ಧಾಂಜಲಿಯ ನಂತರ ಕಲಾಪವನ್ನು ಮುಂದೂಡಲಾಯಿತು.

Facebook Comments

Sri Raghav

Admin