ಅಧಿವೇಶನದ ಮೊದಲ ದಿನವೇ ಕೋರಂ ಕೊರತೆಯಿಂದ ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Session--Belagavi--01

ಬೆಳಗಾವಿ, ನ.13- ಸುವರ್ಣಸೌಧದಲ್ಲಿ ಕರೆಯಲಾಗಿರುವ ಚಳಿಗಾಲದ ಅಧಿವೇಶನ ಮೊದಲ ದಿನವೇ ಕೋರಂ ಇಲ್ಲದೆ ಮುಂದೂಡಿಕೆಯಾದ ಪ್ರಸಂಗ ನಡೆಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಕರೆ ಗಂಟೆ ನಿಂತಾಗ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ವಿಧಾನಸಭೆ ಸಭಾಂಗಣಕ್ಕೆ ಆಗಮಿಸಿದರು. ಆದರೆ ಆ ಸಮಯಕ್ಕೆ ಸಭಾಂಗಣದಲ್ಲಿ ಕೇವಲ 15 ಮಂದಿ ಮಾತ್ರ ಶಾಸಕರಿದ್ದರು. ವಿರೋಧ ಪಕ್ಷ ಮತ್ತು ಪ್ರತಿಪಕ್ಷದ ಭಾಗದಲ್ಲಿ ಶಾಸಕರ ಕೊರತೆ ಎದ್ದು ಕಾಣುತ್ತಿತ್ತು. ಸಭಾಧ್ಯಕ್ಷ ತಮ್ಮ ಸ್ಥಾನದಲ್ಲಿ ಆಸೀನರಾದಾಗ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದರೆ 15ನ್ನು ದಾಟುತ್ತಿರಲಿಲ್ಲ.

ಇದರಿಂದ ಅಸಮಾಧಾನಗೊಂಡ ಸಭಾಧ್ಯಕ್ಷರು ನೋವಿನಿಂದಲೇ ಕಲಾಪವನ್ನು ಕೋರಂ ಸೇರುವವರೆಗೂ ಮುಂದೂಡುತ್ತಿದ್ದೇನೆ ಎಂದು ಘೋಷಿಸಿದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಸೇರಿದಂತೆ ರಾಜ್ಯದ ಗಂಭೀರ ವಿಚಾರಗಳ ಚರ್ಚೆಗೆ ಸಮಾವೇಶಗೊಳ್ಳಬೇಕಿದ್ದ ವಿಧಾನಸಭೆ ಅಧಿವೇಶನದಲ್ಲಿ ಮೊದಲ ದಿನವೇ ಕೋರಂ ಕೊರತೆಯಾಗಿದ್ದು ವಿಪರ್ಯಾಸ. 10 ನಿಮಿಷಗಳ ತಡವಾಗಿ ಕಲಾಪ ಮತ್ತೆ ಆರಂಭಗೊಂಡಿದ್ದು, ಒಂದೇ ಮಾತರಂ ಗೀತೆಯೊಂದಿಗೆ ಸಭಾಧ್ಯಕ್ಷರು ಸದನ ಸಮಾವೇಶಕ್ಕೆ ಚಾಲನೆ ನೀಡಿದರು. ನಂತರ ಸಂತಾಪಕ ಸೂಚಕ ನಿರ್ಣಯ ಮಂಡಿಸಲು ಸಭಾಧ್ಯಕ್ಷರು ಮುಂದಾದಾಗ ಬಿಜೆಪಿ ಶಾಸಕರು ಎಲ್ಲಕ್ಕಿಂತ ಮೊದಲು ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪಟ್ಟು ಹಿಡಿದರು.

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಕಲಾಪ ಆರಂಭಗೊಳ್ಳುವ ಮುನ್ನವೇ ಜಾರ್ಜ್ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು. ಈ ಗದ್ದಲದ ನಡುವೆಯೇ ಸಭಾಧ್ಯಕ್ಷರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.

Facebook Comments

Sri Raghav

Admin