ಆಸ್ಪತ್ರೆಗಳನ್ನು ಬಂದ್ ಮಾಡಿ ಸುವರ್ಣಸೌಧದ ಬಳಿ ಖಾಸಗಿ ವೈದ್ಯರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protest--02

ಬೆಳಗಾವಿ, ನ.13- ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಿ ಇಂದು ಬೆಳಗಾವಿ ಚಲೋ ನಡೆಸಿದರು. ಗದಗ, ಕೊಪ್ಪಳ, ಬೆಳಗಾವಿ, ಮೈಸೂರು, ಕೋಲಾರ, ಚಾಮರಾಜನಗರ, ಬೀದರ್, ಬಿಜಾಪುರ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ವೈದ್ಯರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದ ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸಿ ಈ ವಿಧೇಯಕವನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಈ ವಿಧೇಯಕ ಜಾರಿ ಮಾಡುವುದರಿಂದ ಖಾಸಗಿ ಆಸ್ಪತ್ರೆಗಳ ವೈದ್ಯರುಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ. ಸರ್ಕಾರ ಜನಪರವಾಗಿರಬೇಕು. ಆದರೆ, ಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ಕೆಪಿಎಂಇ ಕಾಯ್ದೆ ಜಾರಿ ಮೂಲಕ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡಲು ಮುಂದಾಗಿರುವ ಕ್ರಮ ಖಂಡನೀಯ ಎಂದು ಖಾಸಗಿ ಆಸ್ಪತ್ರೆಗಳ ಸಂಘದ ಮುಖಂಡ ರವೀಂದ್ರ ತಿಳಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮುಷ್ಕರ ಮುಂದುವರಿಸುವ ಎಚ್ಚರಿಕೆ ನೀಡಿದರು.

ಸಾವಿರಾರು ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಯಿತು. ಕಳೆದ ತಿಂಗಳು ಖಾಸಗಿ ಆಸ್ಪತ್ರೆ ವೈದ್ಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವೈದ್ಯಕೀಯ ಸೇವೆ ಅಗತ್ಯ ಸೇವೆಯಾಗಿರುವ ಕಾರಣ ಯಾವುದೇ ರೀತಿ ಪ್ರತಿಭಟನೆ, ಬಂದ್ ಮಾಡುವಂತಿಲ್ಲ. ಆದರೂ ಖಾಸಗಿ ಆಸ್ಪತ್ರೆಗಳ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಬಾರಿ ಖಾಸಗಿ ವೈದ್ಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ನೀಡಿರಲಿಲ್ಲ. ಆದರೂ ಪ್ರತಿಭಟನೆ ಸಂದರ್ಭದಲ್ಲಿ ಹಲವು ಸಾವು-ನೋವುಗಳ ಘಟನೆ ನಡೆದಿತ್ತು. ಈಗ ಮತ್ತೆ ಖಾಸಗಿ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಖಾಸಗಿ ಆಸ್ಪತ್ರೆಗಳನ್ನು ನಂಬಿರುವ ರೋಗಿಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತದೆ. ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೋ ಕಾದು ನೋಡಬೇಕು.

Facebook Comments

Sri Raghav

Admin