ಜೆಡಿಎಸ್ ನಿಂದ ಬೆಳಗಾವಿಯಲ್ಲಿ ನಾಳೆ ಬೃಹತ್ ರೈತ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

jds
ಬೆಳಗಾವಿ, ನ.13- ಜೆಡಿಎಸ್ ಪಕ್ಷದ ವತಿಯಿಂದ ನಾಳೆ ಬೆಳಗಾವಿಯಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಸಿಪಿಎಡ್ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ಆಯೋಜಿಸಲಾಗಿದ್ದು, 50 ಸಾವಿರಕ್ಕೂ ಹೆಚ್ಚು ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಂಡೋಗಿ ಈ ಸಂಜೆಗೆ ತಿಳಿಸಿದರು.

ನಾಳೆ ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟೂರಾದ ಕಾಕತಿಯಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಪಾದಯಾತ್ರೆ ಮೂಲಕ ಸಿಪಿಎಡ್ ಮೈದಾನಕ್ಕೆ ಬಂದು ಸಮಾವೇಶ ನಡೆಸಲಾಗುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೈಗೊಂಡಿರುವ ಕುಮಾರ ಪರ್ವ, ವಿಕಾಸ ವಾಹಿನಿ ಯಾತ್ರೆ ಹುಬ್ಬಳ್ಳಿ ಮೂಲಕ ನಾಳೆ ಬೆಳಗಾವಿಗೆ ತಲುಪಲಿದೆ. ಇದೇ ಸಂದರ್ಭದಲ್ಲಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ರಾಯಚೂರಿನಿಂದ ಕೈಗೊಂಡಿರುವ ಬೈಕ್ ರ‍್ಯಾಲಿ ನಾಳೆ ಬೆಳಗಾವಿ ತಲುಪಲಿದ್ದು, ನಾಳೆ ಅವರು ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರಲಿದ್ದಾರೆ. ಇವರೊಂದಿಗೆ ಬಾಬಾಗೌಡ ಪಾಟೀಲ್ ಮಗ ಪ್ರಕಾಶ್‍ಗೌಡ ಪಾಟೀಲ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್‍ಗೆ ಸೇರಲಿದ್ದಾರೆ.

ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಪಿ.ಜಿ.ಆರ್.ಸಿಂಧ್ಯಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಾಳೆ ಮಧ್ಯಾಹ್ನ ಸಮಾವೇಶ ನಡೆಯಲಿದೆ. ಉತ್ತರ ಕರ್ನಾಟಕ ಭಾಗವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ತೀವ್ರ ನಿರ್ಲಕ್ಷ್ಯ ಮಾಡಿವೆ. ಶಿಕ್ಷಣ, ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಪರಿವರ್ತನಾ ಯಾತ್ರೆ ಮಾಡುತ್ತಿದ್ದಾರೆ. ಅವರು ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಮಹದಾಯಿ ಸಮಸ್ಯೆ ಪರಿಹರಿಸಬಹುದಿತ್ತು. ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾ ಮಾಡಿಸಬಹುದಿತ್ತು. ಆದರೆ, ಇದಾವುದನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷದಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ರಾಜ್ಯದ ಜನ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ. ನಾಳೆ ಇಲ್ಲಿ ಬೃಹತ್ ರೈತರ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

Facebook Comments

Sri Raghav

Admin