ಬಸವನಗುಡಿಯ ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Kadlekai-Parishe--01

ಬೆಂಗಳೂರು,ನ.13- ವೃಷಭಾವತಿ ನದಿ ಪುನಶ್ಚೇತನ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಭರವಸೆ ನೀಡಿದರು. ಬಸವನಗುಡಿಯ ಐತಿಹಾಸಿಕ ಕಡಲೇಕಾಯಿ ಪರಿಷೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃಷಭಾವತಿ ನದಿಯು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇಲ್ಲಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಉಗಮವಾಗಿದೆ ಆದುದ್ದರಿಂದ ಇದನ್ನು ಪುನಶ್ಚೇತನಗೊಳಿಸಬೇಕು ಎಂದರು. ಕಡಲೇಕಾಯಿ ಬಡವರ ಬಾದಾಮಿಯಾಗಿದ್ದು, ಇದು ಪೌಷ್ಠಿಕ ಆಹಾರವೂ ಸಹ ಆಗಿದೆ. ಕಡಲೇಕಾಯಿ ಎಣ್ಣೆಯಿಂದ ಮಾಡಿದ ಅಡುಗೆ ಬಾಯಿಚಪ್ಪರಿಸುವಂತಹ ರುಚಿಯನ್ನು ನೀಡುತ್ತದೆ. ಪಾರಂಪರಿಕ ಕಡಲೇಕಾಯಿ ಹಬ್ಬವನ್ನು ಇಷ್ಟು ದೊಡ್ಡಮಟ್ಟಕ್ಕೆ ಆಚರಿಸಲು ನಗರ ನಿರ್ಮಾತೃ ಕೆಂಪೇಗೌಡರೇ ಕಾರಣಕರ್ತರು ಎಂದರು.

ಕಡಲೇಕಾಯಿ ಪರಿಷೆಗೆ ಇಂದು ಹಲವಾರು ರಾಜ್ಯಗಳಿಂದ ಕಡಲೇಕಾಯಿಯನ್ನು ತಂದು ಮಾರಾಟ ಮಾಡಲಾಗುತ್ತದೆ. ಇದನ್ನು ಎಲ್ಲರೂ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೇಯರ್ ಸಂಪತ್ ರಾಜ್ ಮಾತನಾಡಿ, ದೇವಾಲಯದಲ್ಲಿ ಕಡಲೇಕಾಯಿಯಿಂದಲೇ ದೊಡ್ಡ ಗಣೇಶನಿಗೆ ಅಲಂಕಾರ ಮಾಡಿದ್ದು, 70 ಕೆ.ಜಿ. ಕಡಲೇಕಾಯಿಯಿಂದ ಅಭಿಷೇಕವನ್ನು ಮಾಡಿರುವುದು ವಿಶೇಷವಾಗಿದೆ. ಕಡಲೇಕಾಯಿ ಬೆಳೆಯುವುದರ ಹಿಂದೆ ರೈತರ ಶ್ರಮವಿದೆ. ನಮ್ಮ ದೇಶದಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ಅನೇಕ ಮಕ್ಕಳು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಡಲೇಕಾಯಿ ಬೀಜವೂ ಪೌಷ್ಠಿಕ ಆಹಾರವಾಗಿದ್ದು, ಇದನ್ನು ಸೇವಿಸುವುದರ ಮೂಲಕ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಬಹುದಾಗಿದೆ ಎಂದರು.

Kadlekai-Parishe--03

ಬೆಂಗಳೂರಿನಲ್ಲಿ ಐಟಿಬಿಟಿಯಂತಹ ಕಂಪನಿಗಳಿದ್ದು, ಇಂತಹ ಹಬ್ಬಗಳಿಂದ ಜನರಲ್ಲಿ ಸಂತೋಷವನ್ನುಂಟು ಮಾಡುತ್ತದೆ. ಮುಂದಿನ ಬಾರಿ ಕಡಲೇಕಾಯಿ ಪರೀಷೆಗೆ ಬಿಬಿಎಂಪಿಯ 198 ಸದಸ್ಯರನ್ನು ಕರೆತರುವ ಮೂಲಕ ಈ ಹಬ್ಬದ ಮಹತ್ವವನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ಕಡಲೇಕಾಯಿ ಪರೀಷೆಯು ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಕಡೆಯ ಕಾರ್ತಿಕ ಸೋಮವಾರದಂದು ಈ ಪರೀಷೆಯು ನಡೆಯಲಿದೆ. ರಾಮಕೃಷ್ಣ ಆಶ್ರಮದ ವೃತ್ತದಿಂದ ರಾಶಿ ರಾಶಿ ಕಡಲೇಕಾಯಿಯನ್ನು ನಾವು ನೋಡಬಹುದಾಗಿದೆ. ಇದನ್ನು ನೋಡುವುದೇ ನಮಗೆ ಸಂತೋಷ ಎಂದು ಹರ್ಷ ವ್ಯಕ್ತಪಡಿಸಿದರು.

Kadlekai-Parishe--04

ಕಡಲೇಕಾಯಿ ಪರಿಷೆಗೆ ಬನ್ನಿ, ಕೈಚೀಲ ತನ್ನಿ ಎಂಬ ಸಂದೇಶವನ್ನು ಕೂಡ ಸಾರಲಾಯಿತು.2013ರಲ್ಲಿ ಸೋಮವಾರ ಪ್ರಾರಂಭವಾದ ಕಡಲೇಕಾಯಿ ಪರಿಷೆಯು ಗುರುವಾರದವರೆಗೆ 80 ಸಾವಿರ ಪ್ಲಾಸ್ಟಿಕ್ ಬ್ಯಾಗ್‍ಗಳು ಪತ್ತೆಯಾಗಿತ್ತು. ಭಾನುವಾರ ಒಂದೇ ದಿನ ಮಾತ್ರ 1 ಲಕ್ಷ ಪ್ಲಾಸ್ಟಿಕ್ ಕವರ್‍ಗಳು ಪತ್ತೆಯಾಗಿತ್ತು. ಇದನ್ನು ಮನಗಂಡು ಈ ಭಾರಿ ಎನ್‍ಜಿಓ ಅವರು ಕಾಟನ್ ಬ್ಯಾಗ್ ಅನ್ನು 6 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕಟ್ಟೆ ಸತ್ಯ, ಮಾಜಿ ಮೇಯರ್ ಜಿ.ಪದ್ಮಾವತಿ ಮತ್ತಿತರರಿದ್ದರು. ಕಣ್ಣು ಹಾಯಿಸದಷ್ಟು ದೂರ ರಸ್ತೆಯ ಎರಡೂ ಬದಿಯಲ್ಲೂ ರಾಶಿ ರಾಶಿ ಕಡಲೆ ಕಾಯಿ ಕಣ್ಣಿಗೆ ಕೋರೈಸುತ್ತಿತ್ತು. ಹುರಿದ, ಬೇಯಿಸಿದ, ಹಸಿ ಹಾಗೂ ಒಣ ಕಡಲೆಕಾಯಿಗಳು ಭಕ್ತರನ್ನು ಕೈ ಬೀಸಿ ಕರೆಯುತ್ತಿತ್ತು.

ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಫಸಲು ಕೂಡ ಚೆನ್ನಾಗಿ ಬಂದಿದ್ದು, ಕಡಲೆಕಾಯಿ ಗುಣಮಟ್ಟದಿಂದ ಕೂಡಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಕಡಲೆಕಾಯಿ ವ್ಯಾಪಾರಿಗಳು ಆಗಮಿಸಿದ್ದಾರೆ. ಕಡಲೆಕಾಯಿ ಪರಿಷೆಗೆ ಮಾಗಡಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಶಿರಾ ಸೇರಿದಂತೆ ಮತ್ತಿತರೆಡೆಯಿಂದ ವ್ಯಾಪಾರಿಗಳು ಬಂದಿದ್ದಾರೆ.  ಇದರ ಜತೆಗೆ ಮಂಡಕ್ಕಿ, ಬತಾಸು ಅಂಗಡಿಗಳು ಕೂಡ ಪ್ರಾರಂಭವಾಗಿವೆ. ಇನ್ನು ಮಕ್ಕಳಿಗಾಗಿ ಆಟಿಕೆ ಮಳಿಗೆಗಳಿದ್ದವು.

Facebook Comments

Sri Raghav

Admin