ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಬೆಂಕಿ ಅವಘಡ, ಅಪಾರ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

fire

ಬೆಂಗಳೂರು, ನ.13- ಗಾರ್ಮೆಂಟ್ಸ್‍ವೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೊಳಗಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಪಿ.ಇಂಡಸ್ಟ್ರೀಯಲ್ ಏರಿಯಾ, ಕೋಣನಕುಂಟೆ ಕ್ರಾಸ್‍ನಲ್ಲಿ ಲೆವಬಲ್ ಲಾಂಜಲಿ ಎಂಬ ಗಾರ್ಮೆಂಟ್ಸ್ ಕಾರ್ಖಾನೆ ಇದೆ. ನಿನ್ನೆ ಉದ್ಯೋಗಿಗಳು ಮಧ್ಯಾಹ್ನ 1.30ರವರೆಗೆ ಕೆಲಸ ಮಾಡಿ ತೆರಳಿದ್ದರು. ಸೆಕ್ಯೂರಿಟಿ ಗಾರ್ಡ್ ಕರ್ತವ್ಯದಲ್ಲಿದ್ದರು. ರಾತ್ರಿ 10 ಗಂಟೆ ಸಂದರ್ಭದಲ್ಲಿ ಈ ಗಾರ್ಮೆಂಟ್ಸ್‍ನ ನೆಲಮಾಳಿಗೆಯಲ್ಲಿ ಹೊಗೆ ಬರುತ್ತಿರುವುದನ್ನು ಎದುರು ಕಟ್ಟಡದ ಸೆಕ್ಯೂರಿಟಿಗಾರ್ಡ್ ಗಮನಿಸಿ ಗಾರ್ಮೆಂಟ್ಸ್ ಕಾರ್ಖಾನೆಯ ಸೆಕ್ಯುರಿಟಿ ಗಾರ್ಡ್‍ಗೆ ತಿಳಿಸಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾಗಿ ಅಗ್ನಿ ಶಾಮಕ ವಾಹನಗಳೊಂದಿಗೆ ಬಂದು ಬೆಂಕಿ ನಂದಿಸಿ ತೆರಳಿದ್ದರು. ಮತ್ತೆ 12 ಗಂಟೆ ಸಂದರ್ಭದಲ್ಲಿ ಗಾರ್ಮೆಂಟ್ಸ್ ಕಟ್ಟಡ 4ನೇ ಮಹಡಿಯಲ್ಲಿ ದಟ್ಟಹೊಗೆ ಆವರಿಸಿರುವುದು ಕಂಡು ತಕ್ಷಣ ಅಗ್ನಿಶಾಮಕದಳ ಹಾಗೂ ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ತಿಳಿಸಿದ್ದಾರೆ. ಒಟ್ಟು 22 ಅಗ್ನಿಶಾಮಕ ವಾಹನ ಗಳೊಂದಿಗೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು, ಪೊಲೀಸರು ಸೇರಿ 70 ಮಂದಿ ನಿರಂತರ ಶ್ರಮವಹಿಸಿ ಬೆಳಗಿನ ಜಾವ 6.30ರವರೆಗೂ ಬೆಂಕಿ ನಂದಿಸಿ, ನಿಯಂತ್ರಣಕ್ಕೆ ತರುವಲ್ಲಿ ಹರಸಾಹಸಪಟ್ಟರು. ಬೆಂಕಿಯ ಕೆನ್ನಾಲಿಗೆಯಿಂದ ಕಟ್ಟಡದಲ್ಲಿ ಸಂಗ್ರಹಿಸಲಾಗಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿಯ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಶಾರ್ಟ್‍ಸಕ್ಯೂರ್ಟ್‍ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕುಮಾರಸ್ವಾಮಿಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin