ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ವಸತಿ ಶಾಲೆಯ ಮಕ್ಕಳ ಗೋಳು ಕೇಳೋರೇ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ನ.13-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಟಿ.ನರಸೀಪುರ ತಾಲೂಕಿನ ಕುಡ್ಲೂರು ಗ್ರಾಮದ ಶಾಲೆಯ ಬಳಿ ಪುರಸಭೆ ಕಸ ವಿಲೇವಾರಿ ಘಟಕ ಇದೆ. ಈ ಶಾಲೆಯ ಪಕ್ಕದಲ್ಲಿಯೇ ಸಂಸ್ಕರಿಸಿದ ಕಸದ ರಾಶಿಯನ್ನು ಅಲ್ಲಿ ಹಾಕುತ್ತಿರುವುದರಿಂದ ಶಾಲೆಯ ಆವರಣದಲ್ಲಿ ದುರ್ನಾತ ಬೀರುತ್ತಿದೆ.

ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಸೊಳ್ಳೆ, ನೋಣಗಳ ಕಾಟ ಹೆಚ್ಚಾಗಿ ಪಾಠ ಕೇಳಲು ಸಹ ಆಗದಂತಹ ಪರಿಸ್ಥಿತಿ ಉದ್ಭವಿಸಿದೆ. ಇದೆಲ್ಲಾ ಒಂದು ಕಡೆಯಾದರೆ ಪಾಠ ಕೇಳಲು ಸರಿಯಾದ ಡೆಸ್ಕ್ ವ್ಯವಸ್ಥೆಯೂ ಇಲ್ಲದೆ ನೆಲದಲ್ಲಿಯೇ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಶಾಲೆಯಲ್ಲಿ ಅಳವಡಿಸಲಾಗಿರುವ ಸೋಲಾರ್ ಹೀಟರ್ ಕೆಟ್ಟು 6 ತಿಂಗಳಾದರೂ ಸಹ ಸಂಬಂಧಪಟ್ಟವರು ಅದನ್ನು ಸರಿಪಡಿಸಿಲ್ಲ. ಇದರಿಂದ ಮಕ್ಕಳು ಬೆಳಗ್ಗೆ ತಣ್ಣೀರು ಸ್ನಾನವೇ ಮಾಡುತ್ತಿದ್ದಾರೆ.

ಕಸ ವಿಲೇವಾರಿ ಘಟಕದ ಪಕ್ಕ ನಿರ್ಜನ ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಹಿಡಿದು ತಂದು ಬಿಡುತ್ತಿದ್ದಾರೆ. ಈ ನಾಯಿಗಳು ರಾತ್ರಿ ಹೊತ್ತು ವಿಪರೀತ ಬೋಗಳುತ್ತಾ ಕಿರುಚಾಡುತ್ತವೆ. ಇದರಿಂದ ಮಕ್ಕಳು ಮಲಗಲು ಆಗದೇ, ಓದಲೂ ಆಗದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೋಷಕರು ಹಲವು ಭಾರಿ ಸಂಭಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೂ ಯಾರೂ ಕೂಡ ಕ್ರಮಕೈಗೊಂಡಿಲ್ಲ. ಇದೇ ರೀತಿ ಸಮಸ್ಯೆಗಳು ಇದ್ದು, ಬಗೆಹರಿಸದಿದ್ದರೆ ಪೋಷಕರು ಮಕ್ಕಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

Facebook Comments

Sri Raghav

Admin