320 ದಾಟಿದ ಇರಾನ್-ಇರಾಕ್ ಭೂಕಂಪದಲ್ಲಿ ಸತ್ತವರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

DOfFGycXcAAY5cZ

ಸುಲೈಮಾನಿಯಾಹ್(ಇರಾಕ್), ನ.13-ಇರಾನ್-ಇರಾಕ್‍ನ ಪರ್ವತಮಯ ಗಡಿ ಪ್ರದೇಶದ ಮೇಲೆ ನಿನ್ನೆ ತಡ ರಾತ್ರಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ 320ಕ್ಕೂ ಹೆಚ್ಚು ಮಂದಿ ಮೃತಪಟ್ಟು, 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆಯ ಭೂಕಂಪದಲ್ಲಿ ಅನೇಕರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಭೀಕರ ಪ್ರಕೃತಿ ವಿಕೋಪದ ನಂತರ ಆ ಪ್ರದೇಶದಲ್ಲಿ ಭೂಕುಸಿತಗಳು ಸಂಭವಿಸಿದ್ದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

DOfFGyiWsAEmO95

ಭೂಕಂಪದಿಂದ ಅನೇಕ ಕಟ್ಟಡಗಳು ಮತ್ತು ಮನೆಗಳು ನೆಲಸಮವಾಗಿವೆ. ಇದಾದ ನಂತರ ಈ ಪ್ರದೇಶದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿ ಪರಿಸ್ಥಿತಿಯನ್ನು ಮತ್ತಷ್ಟು ಘೋರವಾಗಿಸಿತು. ಉರುಳಿಬಿದ್ದಿರುವ ಕಟ್ಟಡಗಳು ಮತ್ತು ಭೂಕುಸಿತದಿಂದ ಕಲ್ಲು-ಮಣ್ಣುಗಳಡಿ ಅನೇಕರು ಸಿಲುಕಿರುವ ಸಾಧ್ಯತೆ ಇದೆ.
ಇರಾಕ್ ಸಮೀಪವಿರುವ ಇರಾನ್‍ನ ಕೆರ್ಮಾನ್‍ಶಾಹ್ ಮತ್ತು ಪರ್ವತ ತಪ್ಪಲಿನ ಪ್ರದೇಶವಾದ ಉತ್ತರ ಇರಾಕ್‍ನ ಸುಲೈಮಾನಿಯಾಹ್ ವಲಯದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಕೆರ್ಮಾನ್‍ಶಾಹ್ ಪ್ರದೇಶದಲ್ಲೇ ಆರಂಭಿಕ ವರದಿಯಲ್ಲಿ 300 ಮಂದಿ ಅಸುನೀಗಿದ್ದಾರೆ. ಇವರಲ್ಲಿ 60 ಜನ ಗಡಿಯಿಂದ 14 ಕಿ.ಮೀ. ದೂರವಿರುವ ಶಪೆರ್ಲ್-ಎ-ಜಹಾಬ್ ಪ್ರದೇಶದವರು. ಇರಾಕ್‍ನೊಳಗೆ ಅನೇಕರು ಬಲಿಯಾಗಿದ್ದರೆ, 300ಕ್ಕೂ ಹೆಚ್ಚು ನಿವಾಸಿಗಳು ತೀವ್ರ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

DOfFGygW4AInguE

ಅಮೆರಿಕದ ಭೂಸರ್ವೇಕ್ಷಣಾ ಇಲಾಖೆಯ ಪ್ರಕಾರ ಹಲಾಭಾಜ್‍ನಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಇರಾಕ್-ಇರಾನ್ ಗಡಿ ಭಾಗದಲ್ಲಿ 7.2ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ. ಇದೇ ವೇಳೆ ಇರಾನ್ ಭೂಕಂಪ ಅಧ್ಯಯನ ಕೇಂದ್ರದಲ್ಲಿ ದಾಖಲಾಗಿರುವಂತೆ ಅಜ್‍ಗಲೇಹ್ ಬಲಿ 7.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಕುರ್ದಿಸ್ತಾನ ವಲಯದಲ್ಲಿರುವ ಇರಾಕ್‍ನ ದರ್ಬಂದಿಕಾನ್ ಮತ್ತು ಸುತ್ತಮುತ್ತಲ ಪಟ್ಟಣದಲ್ಲೂ ಭೂಕಂಪದಿಂದ 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಕ್ಕಿ ಹಾಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಿನ್ನೆ ಮಧ್ಯರಾತ್ರಿಯಿಂದಲೇ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಉಪ ಗೌರ್ನರ್ ಮುಜಾತಬ್ ನಿಕ್ಕೆರ್‍ದಾರ್ ತಿಳಿಸಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿರುವುದರಿಂದ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಸವಾಲಾಗಿದೆ.

DOfHhMeVwAAHxUI

ಭೂಕಂಪದ ನಂತರ ಈ ಎರಡು ದೇಶಗಳ ಗಡಿಭಾಗದ ನಗರಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ. ಸಾವಿರಾರು ನಾಗರಿಕರನ್ನು ಸ್ಥಳಾಂತರಗೊಳಿಸಲಾಗಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ವಿಮಾನಗಳ ಹಾರಾಟಕ್ಕೂ ಅಡ್ಡಿಯಾಗಿದೆ. ರಸ್ತೆ ಸಂಪರ್ಕ ಕಡಿದು ಹೋಗಿದ್ದು, ದೂರದ ಗ್ರಾಮಗಳಿಗೆ ತೊಂದರೆಯಾಗಿದೆ. ಹಲಬ್ಜಾ ಗ್ರಾಮದಲ್ಲಿ 12 ವರ್ಷದ ಬಾಲಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಆಡಳಿತದ ಸಚಿವ ಅಬ್ದೊಲ್‍ರೆಜ್ಜಿ ರೆಹಮಾನಿ ಫಜ್ಜಿಲ್ ತಿಳಿಸಿದ್ದಾರೆ.

ಭೂಕಂಪಕ್ಕೆ ತುತ್ತಾದ ಪ್ರದೇಶಗಳ ಬಹಳಷ್ಟು ಮನೆಗಳನ್ನು ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಿದ್ದು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸುಲಭವಾಗಿ ಹಾನಿಗೀಡಾಗುತ್ತವೆ. ಉತ್ತರ ಇರಾನ್‍ನಲ್ಲಿ 1990ರಲ್ಲು 7.4ರ ತೀವ್ರತೆ ವಿನಾಶಕಾರಿ ಭೂಕಂಪ 40,000 ಜನರನ್ನು ಆಪೋಶನ ತೆಗೆದುಕೊಂಡಿತ್ತು. ಈ ಘೋರ ದುರಂತದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 5 ಲಕ್ಷ ಗ್ರಾಮಸ್ಥರು ನಿರ್ವಸತಿಗರಾಗಿದ್ದರು. ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸುಮಾರು 2,000 ಗ್ರಾಮಗಳು ಹೇಳಹೆಸರಿಲ್ಲದಂತೆ ನಿರ್ನಾಮವಾಗಿದ್ದವು.

ಇದಾದ 13 ವರ್ಷಗಳ ನಂತರ ಇರಾನ್‍ನ ಬಾಮ್ ನಗರದ ಮೇಲೆ ಎರಗಿದ ಭೂಕಂಪದಿಂದ 31,000 ಮಂದಿ ಮೃತಪಟ್ಟಿದ್ದರು. ಅದಾದ ನಂತರ 2005 ಮತ್ತು 2012ರಲ್ಲಿ ಸಂಭವಿಸಿ ಭೂಕಂಪಗಳು ಕ್ರಮವಾಗಿ 600 ಮತ್ತು 300 ಜನರನ್ನು ಬಲಿ ತೆಗೆದುಕೊಂಡಿತ್ತು.

Facebook Comments

Sri Raghav

Admin