ಅದ್ಭುತ ಲಾಂಛನಗಳ ಹಿಂದಿನ ಕಲಾವಿದ ಶಂಕರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

lanchana-1

– ಗೊರೂರು ಪಂಕಜ

ಖ್ಯಾತ ಕಲಾವಿದ ಕೆ.ಎನ್.ಶಂಕರಪ್ಪ ಅವರು, ರಾಜ್ಯದ ಸಾಹಿತ್ಯ, ಸಂಸ್ಕತಿಯ ಹೆಗ್ಗುರುತಾಗಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಈ ಬಾರಿಯ ಲಾಂಛನವನ್ನು ಅರ್ಥಪೂರ್ಣವಾಗಿ ರೂಪಿಸಿದ್ದಾರೆ. ಕನ್ನಡ ಸಾಹಿತ್ಯ ಸಂರಕ್ಷಣೆ, ಅಭಿವೃದ್ಧಿ, ವಿಸ್ತರಣೆ, ಸಾಹಿತಿಗಳ ಪುರಸ್ಕಾರಕ್ಕೆ ರಾಜಾಶ್ರಯವೇ ಮುಖ್ಯವಾಗಿದ್ದುದನ್ನು ಮನಗಂಡು ಸಾಹಿತ್ಯ ಪರಿಷತ್‍ಗೆ ಬುನಾದಿ ಹಾಕಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಎಡಬಲಗಳಲ್ಲಿ ಗಜಗೌರವ ವಂದಿತರಾಗಿರುವಂತೆ ಲಾಂಛನದ ಕೇಂದ್ರ ಸ್ಥಾನದಲ್ಲಿ ಇರಿಸಲಾಗಿದೆ. ಮೈಸೂರಿನ ಹೆಗ್ಗುರುತುಗಳಾಗಿರುವ ನಂದಿ, ನಂಜನಗೂಡಿನ ದೇಗುಲ, ರಸಬಾಳೆ, ಸಂತಫಿಲೋಮಿನಾ ಇಗರ್ಜಿ, ಮೊಹಲ್ಲಾ ಮಸೀದಿ ಜೊತೆಗೆ ಅಡಿಯಲ್ಲಿ ಮಹಿಷಾಸುರನನ್ನೂ, ಒಂದೆಡೆ ತಾಯಿ ಚಾಮುಂಡೇಶ್ವರಿ, ಮತ್ತೊಂದೆಡೆ ಪರಿಷತ್ ಮುದ್ರೆಯೂ ಲಾಂಚನದಲ್ಲಿ ರಾರಾಜಿಸುತ್ತಿವೆ.

ಮುಖ್ಯಭೂಮಿಕೆಯಲ್ಲಿ ಲಾಂಛನದ ಸುಂದರ ಪ್ರಭಾವಳಿಯ ಅಡಿಯಲ್ಲಿ ನಾಡಿನ ಹೆಮ್ಮೆಯ ದಸರಾ ವೈಭವ, ಅಂಬಾರಿ ಹೊತ್ತವನು ಗಜರಾಜನಾಗಿರುವುದರಿಂದ ಅವನೊಂದಿಗೆ ರಾಣಿ (ಹೆಣ್ಣಾನೆ)ಯೂ ಇದ್ದಾಳೆ. ರಾಜಮನೆತನದ ವೈಭವ ಮತ್ತು ಮಂತ್ರಿ ಪರಿಷತ್ ನೆನಪಿಸುವ ಮೈಸೂರು ಪೇಟದಲ್ಲಿ ವಿರಾಜಮಾನರಾದ ಸಿಬ್ಬಂದಿವರ್ಗ, ಹರ್ಷೊಲ್ಲಾಸದಿಂದ ಮೆರವಣಿಗೆ ಮುನ್ನಡೆಸುವ ವಾದ್ಯಗೋಷ್ಟಿ, ಸಾಂಸ್ಕøತಿಕ ತಂಡ, ಶ್ವೇತಚ್ಛತ್ರಗಳ ಹಿನ್ನೆಲೆಯ ಮೈಸೂರಿನ ಅಂಬಾವಿಲಾಸ ಅರಮನೆ. ಜೊತೆಗೆ ಕನ್ನಡ ಸಾಹಿತ್ಯ ಮುಕುಟಕ್ಕೆ ರತ್ನದೋಪಾದಿಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರಗಳು, ನಾಡಿನ ಹೆಮ್ಮೆಯ ಹಳೆಬೀಡು ದೇವಾಲಯ ಇವೆ. ಇಷ್ಟೆಲ್ಲವು ಲಾಂಛನದಲ್ಲಿ ವಿಜೃಂಭಿಸುವಂತೆ ಸಿದ್ಧಗೊಳಿಸುವುದು ಸಾಮಾನ್ಯವಲ್ಲ. ಇಂಥ ಅಸಾಮಾನ್ಯವಾದ ಲಾಂಛನವನ್ನು ಅತ್ಯಾಕರ್ಷಕವಾಗಿ ಶಂಕರಪ್ಪನವರು ರೂಪಿಸಿರುವುದು ಇವರ ಕಲಾ ಪ್ರತಿಭೆಯ ಪ್ರತೀಕ.

ಪ್ರಭಾವಳಿ: ಮೈಸೂರನ್ನು ಮರೆಯಲಾಗದಂತೆ ಮಾಡುವ, ಮೈಸೂರಿನ ಹೆಸರನ್ನು ತನ್ನೊಡನೆ ಅಂಟಿಸಿಕೊಂಡಿರುವ ವೀಳ್ಯದೆಲೆ ಮತ್ತು ಮಲ್ಲಿಗೆಮೊಗ್ಗುಗಳಿಂದ ಅಲಂಕೃತವಾದ ಸುಂದರ ಅರ್ಥಪೂರ್ಣ ಪ್ರಭಾವಳಿಯಲ್ಲಿ ಕನ್ನಡ ತಾಯಿ ಭುವನೇಶ್ವರಿ ವಿರಾಜಮಾನಳಾಗಿದ್ದಾಳೆ. ನೆತ್ತಿಯಲ್ಲಿ ಹಾರಾಡುತ್ತಿದೆ ಪರಿಷತ್ ಕನ್ನಡ ಧ್ವಜ. ಹೃದಯ ಸ್ಥಾನದಲ್ಲಿದೆ ನಮ್ಮ ಕಿವಿಗಳಲ್ಲಿ ಅನುಗಾಲ ಇರಬೇಕಾದ, ಅನುರಣಿಸಬೇಕಾದ ಮೈಸೂರಿನ ಉದಯರವಿಯ ಕಿವಿಮಾತಾದ ಕನ್ನಡವೇ ಸತ್ಯ- ಕ್ನನಡವೇ ನಿತ್ಯ. ಅಲ್ಲದೆ ಶಂಕರಪ್ಪ ಅವರು 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕದ ಲಾಂಛನವನ್ನೂ ವಿನ್ಯಾಸಗೊಳಿಸುವ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಹಲವಾರು ಕಾವ್ಯ ಕುಂಚ ಗಾಯನ, ಹಲ್ಮಿಡಿ ಉತ್ಸವ, ಹೊಯ್ಸಳೋತ್ಸವ, ಕಣ್ಣಿಗೆ ಬಟ್ಟೆ ಕಟ್ಟಿ ಕಾವ್ಯ ಚಿತ್ರ ರಚನೆಗಳಲ್ಲಿ ಪಾಲ್ಗೊಂಡಿರುವ ಹೆಗ್ಗಳಿಕೆ ಪಡೆದಿರುವ ಶಂಕರಪ್ಪ ಅವರು ಪೋಟೋಗ್ರಫಿ, ವಿಜ್ಞಾನ ಮಾದರಿ ತಯಾರಿಕೆ ಅಭಿನಯ, ಪೇಪರ್ ಡಿಸೈನ್, ಛದ್ಮವೇಷ ಉಪಕರಣಗಳ ತಯಾರಿಕೆ ಮುಂತಾದವುಗಳಲ್ಲಿಯೂ ಪರಿಣಿತಿ ಪಡೆದಿದ್ದಾರೆ.

ಪುರಸ್ಕಾರ: ಮೂಲತಃ ಹಾಸನದವರಾದ ಇವರು ಪ್ರಸ್ತುತ ಬೆಳ್ಳೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಶಂಕರಪ್ಪ ಅವರು ಬಾಲ್ಯದಿಂದಲೇ ದೇಗುಲಗಳ ವರ್ಣಲೇಪನ, ಛಾಯಗ್ರಹಣದಲ್ಲಿ ಆಸಕ್ತಿ ಹೊಂದಿದವರು. ಮುಂಬಯಿಯ ಕಲಾಸ್ಪಂದನ ಗೋಲ್ಡ್ ಕ್ಲಾಸಿಕ್ ಪ್ರಶಸ್ತಿ, ದೆಹಲಿಯ ಅಗ್ನಿಪತ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ಸಿಲ್ವರ್ ಮೆಡಲ್ ಪುರಸ್ಕಾರ, ಕರುನಾಡ ಲಲಿತಕಲಾ ತಿಲಕ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ. ಸಾಕಷ್ಟು ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ನವದೆಹಲಿ, ಮುಂಬೈ ಮತ್ತು ಹಂಗೇರಿಯ ಬುಡಾಪೆಸ್ಟ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾಪ್ರದರ್ಶನ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ಭಾಗವಹಿಸಿ ಕರ್ನಾಟಕದ ಕೀರ್ತಿ ಎತ್ತಿ ಹಿಡಿದಿದ್ದಾರೆ. ವಿದ್ಯಾರ್ಥಿಗಳಿಗೆ, ಆಸಕ್ತರಿಗಾಗಿ ರಾಜ್ಯಾದ್ಯಂತ ನೂರಾರು ಚಿತ್ರಕಲಾ ಶಿಬಿರಗಳನ್ನು ಆಯೋಜಿಸಿ ಪೋತ್ಸಹಿಸುತ್ತಿರುವ ಶಂಕರಪ್ಪ ಅವರು ಹಲವು ಐತಿಹಾಸಿಕ ಲಾಂಛನಗಳ ರುವಾರಿಯಾಗಿದ್ದು, ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕೆಂಬ ಹಂಬಲ ಹೊಂದಿದ್ದಾರೆ. ಅವರ ಕಲ್ಪನೆಯ ಸಾದೃಶ್ಯವೆನಿಸುವ ಮತ್ತಷ್ಟು ಕಲಾಕೃತಿಗಳು ಮೂಡಿಬರಲಿ, ಅವರ ಕನಸುಗಳು ನನಸಾಗಲಿ.

Facebook Comments

Sri Raghav

Admin