ಖಾಸಗಿ ಆಸ್ಪತ್ರೆಗಳ ವಿಧೇಯಕ ಅಂಗೀಕಾರವಾಗದಿದ್ದರೆ ರಮೇಶ್‍ಕುಮಾರ್ ರಾಜೀನಾಮೆ..!?

ಈ ಸುದ್ದಿಯನ್ನು ಶೇರ್ ಮಾಡಿ

ramesh-kumAR-V

ಬೆಳಗಾವಿ (ಸುವರ್ಣಸೌಧ), ನ.14- ಖಾಸಗಿ ಆಸ್ಪತ್ರೆಗಳ ವಿಧೇಯಕ ವಿಧಾನಮಂಡಲದಲ್ಲಿ ಮಂಡನೆಯಾಗಿ ಅಂಗೀಕಾರಗೊಳ್ಳದೆ ಇದ್ದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಜನಸಾಮಾನ್ಯರನ್ನು ಸುಲಿಗೆ ಮಾಡುವಂತಹ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ತಿದ್ದುಪಡಿ ವಿಧೇಯಕವನ್ನು ರೂಪಿಸಿದೆ. ಇದು ಆಡಳಿತ ಪಕ್ಷದಲ್ಲೇ ಹಲವರ ವಿರೋಧಕ್ಕೆ ಕಾರಣವಾಗಿದೆ. ವಿರೋಧ ಪಕ್ಷದಲ್ಲೂ ಬಹಳಷ್ಟು ಮಂದಿ ವಿಧೇಯಕದ ವಿರುದ್ಧವಾಗಿದ್ದಾರೆ.

ಖಾಸಗಿ ಆಸ್ಪತ್ರೆಗಳು ದೊಡ್ಡ ಪ್ರಮಾಣದಲ್ಲಿ ಲಾಬಿ ಆರಂಭಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೇರಿ ಹೇಗಾದರೂ ಮಾಡಿ ವಿಧೇಯಕವನ್ನು ಮೂಲೆಗುಂಪು ಮಾಡುವ ಸತತ ಪ್ರಯತ್ನ ನಡೆಸಿವೆ. ಇದಕ್ಕೆ ಬೆನ್ನೆಲುಬಾಗಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ, ವೈದ್ಯರು ನಿನ್ನೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ವೈದ್ಯರ ಮುಷ್ಕರವನ್ನು ತಪ್ಪಿಸಲು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಿದರು.

ವಿಧೇಯಕ ರೂಪಿಸಿರುವುದು ಜನಸಾಮಾನ್ಯರ, ಬಡವರ ಅನುಕೂಲಕ್ಕಾಗಿ. ಅದರ ಹಿಂದೆ ನಿಮಗೆ ತೊಂದರೆ ನೀಡುವ ಉದ್ದೇಶ ಇಲ್ಲ. ಹೀಗಾಗಿ ವಿಧೇಯಕವನ್ನು ವಿರೋಧಿಸಬೇಡಿ. ಅದು ಜಾರಿಯಾಗುವ ಮುನ್ನ ನಿಮ್ಮೊಂದಿಗೆ ಚರ್ಚೆ ಮಾಡಿಯೇ ಅನುಷ್ಠಾನಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಆರಂಭದಲ್ಲಿ ವೈದ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರಾದರೂ ಅಂತಿಮ ಹಂತದ ಖಾಸಗಿ ವೈದ್ಯಕೀಯ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ಕಾರದ ಅಭಿಪ್ರಾಯವನ್ನು ತಿರಸ್ಕರಿಸಲಾಯಿತು. ಮಸೂದೆ ಮಂಡನೆಯಾಗಬಾರದು ಎಂಬ ನಿಲುವಿಗೆ ವೈದ್ಯಕೀಯ ಸಂಘ ಅಂಟಿಕೊಂಡಿದೆ. ಹೀಗಾಗಿ ಪ್ರತಿಭಟನೆಯನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸಲು ನಿರ್ಧರಿಸಿ ಇಂದೂ ಕೂಡ ಪ್ರತಿಭಟನೆ ಮುಂದುವರೆದಿದೆ.

ಈ ನಡುವೆ ಸಂಪುಟದ ಹಲವಾರು ಸಚಿವರು ವಿಧೇಯಕ ಮಂಡನೆಯಿಂದ ಸರ್ಕಾರಕ್ಕೆ ತೊಂದರೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ವಿರೋಧವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ವಿಧೇಯಕ ಮಂಡನೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಸಚಿವರು ರಮೇಶ್‍ಕುಮಾರ್ ಅವರ ಪ್ರಯತ್ನಕ್ಕೆ ತಣ್ಣೀರೆರಚಲು ಆರಂಭಿಸಿದ್ದಾರೆ. ಒಂದು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯಕ್ಕೆ ವಿಧೇಯಕ ಮಂಡನೆಯನ್ನು ಕೈಬಿಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ್‍ಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ರಮೇಶ್‍ಕುಮಾರ್ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದು, ಒಂದು ವೇಳೆ ಮಸೂದೆ ಮಂಡನೆಯಾಗದಿದ್ದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಇಕ್ಕಟ್ಟಿಗೆ ಸಿಲುಕಿದ್ದು, ರಮೇಶ್‍ಕುಮಾರ್ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ರಮೇಶ್‍ಕುಮಾರ್ ಒಪ್ಪದೆ ಇದ್ದರೆ ಕಾಟಾಚಾರಕ್ಕೆ ವಿಧೇಯಕ ಮಂಡಿಸಿ ಅಂಗೀಕಾರದ ವೇಳೆ ರಾಜಕೀಯ ತಂತ್ರಗಾರಿಕೆ ಬಳಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

ಬಹುತೇಕ ಪ್ರತಿಪಕ್ಷಗಳು ಕೂಡ ವಿಧೇಯಕವನ್ನು ವಿರೋಧಿಸುವುದರಿಂದ ಅಂತಿಮ ಹಂತದಲ್ಲಿ ವಿಧೇಯಕವನ್ನು ಮತಕ್ಕೆ ಹಾಕುವ ಬಗ್ಗೆ ಚಿಂತನೆ ನಡೆದಿದೆ. ಮತದಾನದಲ್ಲಿ ವಿಧೇಯಕ ಸೋತು ಹೋದರೆ ಸರ್ಕಾರ ಹೊಣೆಗಾರಿಕೆ ನಿಭಾಯಿಸಿದಂತೆಯೂ ಆಗುತ್ತದೆ. ಜೊತೆಗೆ ಪ್ರತಿಪಕ್ಷಗಳ ಬೆಂಬಲ ಸಿಕ್ಕಿಲ್ಲ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಪ್ರತಿಪಕ್ಷಗಳಿಗೆ ಬೇಕಿಲ್ಲ ಎಂಬ ಆರೋಪ ಮಾಡಿ ತಾವು ನುಣುಚಿಕೊಳ್ಳಲು ಸುಲಭವಾಗುತ್ತದೆ ಎಂಬ ಲೆಕ್ಕಾಚಾರವನ್ನು ಸರ್ಕಾರ ಹೊಂದಿದೆ.

Facebook Comments

Sri Raghav

Admin