ಚುಚ್ಚುಮದ್ದಿನ ಸೋಂಕಿನಿಂದಾಗಿ ಯುವತಿ ಸಾವು, ಡಾಕ್ಟರ್ ಎಸ್ಕೇಪ್

Chuchcu--02

ಮೈಸೂರು, ನ.14 – ಚುಚ್ಚುಮದ್ದಿನ ಸೋಂಕಿನಿಂದಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ. ಹಂಪಾಪುರ ಹೋಬಳಿಯ ಕಾಳಹುಂಡಿ ಗ್ರಾಮದ ನಿವಾಸಿ ಅಂಕುಶ (21) ಮೃತಪಟ್ಟ ಯುವತಿ. ಈಕೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ.ಎಸ್ಸಿ ಮುಗಿಸಿದ್ದು, ಡಿಎಡ್ ಸೇರಲು ಸಿದ್ಧತೆ ನಡೆಸುತ್ತಿದ್ದಳು. ಇತ್ತೀಚೆಗೆ ಜ್ವರ ಕಾಣಿಸಿಕೊಂಡಿದ್ದು, ಹಂಪಾಪುರದಲ್ಲಿರುವ ರಾಜು ಎಂಬುವರ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ.

ಡಾ.ರಾಜು ಎಂಬಾತ ಅಂಕುಶ ಅವರಿಗೆ ತೊಡೆಗೆ ಚುಚ್ಚುಮದ್ದು ನೀಡಿದ್ದು, ಈ ವೇಳೆ ಆ ಜಾಗದಲ್ಲಿ ಊತ ಕಾಣಿಸಿಕೊಂಡಿದೆ. ತಕ್ಷಣವೇ ಅಂಕುಶ ರಾಜು ಅವರ ಬಳಿ ತೆರಳಿ ತೋರಿಸಿದಾಗ ಸೋಂಕಿನಿಂದ ಊತ ಕಾಣಿಸಿಕೊಂಡಿರಬಹುದು, ಯಾವುದೇ ತೊಂದರೆಯಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಮರುದಿನ ನೋವು ಹೆಚ್ಚಾಗಿ ಕೀವು ತುಂಬಿಕೊಂಡಿದೆ. ಆತನೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾನೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಆಕೆಯನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅಂಕುಶ ಸಾವನ್ನಪ್ಪಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಡಾಕ್ಟರ್ ರಾಜು ಕ್ಲಿನಿಕ್ ಬೋರ್ಡ್ ಕಿತ್ತುಹಾಕಿ ಪರಾರಿಯಾಗಿದ್ದಾರೆ.

Facebook Comments

Sri Raghav

Admin