ನಿಧಿ ಆಸೆ ತೋರಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‍’ನ ಇಬ್ಬರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ZNidhi--01

ತುಮಕೂರು, ನ.14-ಚಿನ್ನ ಎಂದರೆ ಯಾರಿಗೆ ಆಸೆ ಇಲ್ಲ, ಅದು ಕಡಿಮೆ ಬೆಲೆಗೆ ಸಿಗುತ್ತದೆ ಎಂದರೆ ನನಗೂ ಇರಲಿ, ನನ್ನ ಇಡೀ ಖಾನ್‍ದಾನ್‍ಗೂ ಇರಲಿ ಎನ್ನುವ ಜನರ ಆಸೆಯನ್ನು ಬಂಡವಾಳ ಮಾಡಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‍ನ ಇಬ್ಬರನ್ನು ಜಿಲ್ಲಾ ಅಪರಾಧ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರೀಶ್ ಮತ್ತು ರಮೇಶ್ ಬಂಧಿತ ಆರೋಪಿಗಳು.

ಘಟನೆ ವಿವರ:

ನಿನ್ನೆ ಆರೋಪಿಗಳು ಯುವತಿಯೊಬ್ಬರಿಗೆ ಕರೆ ಮಾಡಿ ನಮಗೆ ನಿಧಿ ಸಿಕ್ಕಿದೆ. ಕಡಿಮೆ ಬೆಲೆಗೆ ನಿಮಗೆ ಕೈ ತುಂಬಾ ಚಿನ್ನ, ಬೆಳ್ಳಿ, ವಜ್ರ ಕೊಡುತ್ತೇವೆ. ನೀವು ನಮಗೆ ಎರಡು ಲಕ್ಷ ರೂ. ಕೊಟ್ಟರೆ ಸಾಕು ಎಂದು ದೂರವಾಣಿ ಕರೆ ಮಾಡಿದ್ದಾರೆ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ಸುದ್ದಿ ತಿಳಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಕೆ.ರಾಘವೇಂದ್ರ ಅವರಿಗೆ ಸೂಚಿಸಿದ್ದಾರೆ.

ಕೂಡಲೇ ವಿಶೇಷ ತಂಡ ರಚಿಸಿಕೊಂಡು ಕಾರ್ಯ ಪ್ರವೃತ್ತರಾದ ತಂಡ ನಮಗೆ ಚಿನ್ನ ಬೇಕು. ಹಣ ಕೊಡುತ್ತೇವೆ ಎಂದು ಗ್ಯಾಂಗಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು , ಯಲ್ಲಾಪುರದ ಬಳಿ ಬನ್ನಿ ಎಂದು ಗ್ಯಾಂಗ್ ಹೇಳಿದಾಗ ಗ್ರಾಹಕರ ಸೋಗಿನಲ್ಲಿ ನಗರದ ಹೊರ ವಲಯದ ಯಲ್ಲಾಪುರ ಸಮೀಪ ತಂಡ ಕಾದು ಕುಳಿತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿದ್ದ ತಂಡವನ್ನು ಸುಮಾರು 10 ಕಿ.ಮೀ ದೂರದ ಲೇ ಔಟ್‍ವೊಂದಕ್ಕೆ ಹೋಗಿ ಮೂರನೆ ವ್ಯಕ್ತಿಗೆ ನಿಧಿ ತರುವಂತೆ ಕರೆ ಮಾಡುತ್ತಾರೆ. ಅಲ್ಲಿಯೇ ಪೊಲೀಸ್ ತಂಡ ಇಬ್ಬರು ಆರೋಪಿಗಳೊಂದಿಗೆ ಕಾಯುತ್ತಿದ್ದಾಗ ದಿಢೀರನೆ ಹಾವೊಂದು ಪ್ರತ್ಯಕ್ಷವಾಗಿ ಪೊಲೀಸರ ಮೇಲೆ ಬೀಳುತ್ತದೆ.

ಒಂದು ಕಡೆ ಕಳ್ಳರು ಮತ್ತೊಂದು ಕಡೆ ಹಾವು. ಹೇಗಾದರೂ ಮಾಡಿ ಆರೋಪಿಗಳನ್ನು ಹಿಡಿಯಲೇ ಬೇಕು ಎಂದು ಪೊಲೀಸರು ತಮ್ಮ ಜೀವದ ಹಂಗನ್ನು ತೊರೆದು ಒಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಮತ್ತೊಬ್ಬ ಸೆರೆ ಸಿಕ್ಕಿದ್ದಾನೆ.
ನಿಧಿ ಸಿಕ್ಕಿದೆ ಎಂದು ನಾವು ಸುಳ್ಳು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದೆವು ಎಂದು ವಿಚಾರಣೆ ವೇಳೆ ತಪೊ್ಪಪ್ಪಿಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ತಾಮ್ರದ ಬಿಂದಿಗೆಯನ್ನು ತೆರೆದು ನೋಡಿದಾಗ ಪೊಲೀಸರೇ ಬೆಚ್ಚು ಬಿದ್ದಿದ್ದಾರೆ.

ಅದರಲ್ಲಿ ಬರೀ ಇದ್ದಿಲು ಪುಡಿ ಮಾತ್ರ ಇತ್ತು. ಇದೀಗ ಖತರ್ನಾಕ್ ಗ್ಯಾಂಗ್ ಗ್ರಾಮಾಂತರ ಠಾಣೆಯ ಅತಿಥಿಯಾಗಿದ್ದು , ಪಿಎಸ್‍ಐ ಯೋಗಾನಂದ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin