ನಿಲ್ಲದ ವೈದ್ಯರ ಮುಷ್ಕರ । ರೋಗಿಗಳ ನರಳಾಟ । ಚಿಕಿತ್ಸೆ ಸಿಗದೆ ಹಲವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Doctor--02

ಬೆಳಗಾವಿ, ನ.14- ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಳಗಾವಿಯ ಸುವರ್ಣಸೌಧದ ಎದುರು ಹೋರಾಟವನ್ನು ಇಂದು ಕೂಡ ಮುಂದುವರಿಸಿದ್ದು, ಅಮಾಯಕ ರೋಗಿಗಳ ಪ್ರಾಣ ಸಂಕಟ ಕೇಳುವವರಿಲ್ಲದಂತಾಗಿದೆ. ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವಿನ ಹಗ್ಗ-ಜಗ್ಗಾಟದಿಂದ ಅಮಾಯಕ ರೋಗಿಗಳ ಪರದಾಟ ತೀವ್ರಗೊಂಡಿದೆ. ವೈದ್ಯರ ಮುಷ್ಕರಕ್ಕೆ ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ. ನಿನ್ನೆ ಇಬ್ಬರು ರೈತರು ಸಾವನ್ನಪ್ಪಿದ್ದು, ಇಂದು ಸೂಕ್ತ ಚಿಕಿತ್ಸೆ ಸಿಗದೆ ಪಿಡಿಒ ಮಗು, ಒಬ್ಬ ರೈತ ಸೇರಿದಂತೆ ಮೂವರು ಪ್ರಾಣ ಕಳೆದುಕೊಳ್ಳಬೇಕಿದೆ.
ಗರ್ಭಿಣಿಯರು ಸೂಕ್ತ ಚಿಕಿತ್ಸೆ ಸಿಗದೆ ನರಳಾಡಿದರೆ, ಮಕ್ಕಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಹಾಸನ ಜಿಲ್ಲೆ ಸಿದ್ದಯ್ಯ ನಗರದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ನದೀಂಪಾಷ-ಫರ್ಹಾ ದಂಪತಿಯ ಮೂರು ತಿಂಗಳ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವಿನ ಚಿಕಿತ್ಸೆಗಾಗಿ ಜಿಲ್ಲೆಯಾದ್ಯಂತ ಆಸ್ಪತ್ರೆಗಳನ್ನು ಹುಡುಕಾಡಿದ್ದಾರೆ. ಮಾರ್ಗಮಧ್ಯದಲ್ಲೇ ಮಗು ಮೃತಪಟ್ಟಿದೆ.

ಕೊಪ್ಪಳ ಜಿಲ್ಲೆಯ ಪಿಡಿಒ ಗ್ಯಾನಪ್ಪ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತವಾದ ಸಂದರ್ಭದಲ್ಲಿ ಕೊಪ್ಪಳದ ಗಂಗಾವತಿ ಆಸ್ಪತ್ರೆಗೆ ತೆರಳಿದ್ದರು. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಬೆಳಗಾವಿಯ ಅಥಣಿ ತಾಲೂಕಿನ ಇಂಗಳಗಾಂವ್ ನಿವಾಸಿ ಕಲ್ಲಪ್ಪ ಶ್ರೀಶೈಲ ಕೂಡ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.   ಕೊಪ್ಪಳ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿದ್ದರಿಂದ ಗರ್ಭಿಣಿಯರು, ವೃದ್ಧರು ಚಿಕಿತ್ಸೆ ಸಿಗದೆ ನರಳಾಡುತ್ತಿದ್ದುದು ಕಂಡುಬಂತು.

ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದರೂ ಅಲ್ಲಿ ಅಗತ್ಯ ಚಿಕಿತ್ಸೆ ದೊರೆಯದೆ ರೋಗಿಗಳು ಆತಂಕಕ್ಕೆ ಒಳಗಾಗಿದ್ದರು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿ, ಧಾರವಾಡದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ರೋಗಿಗಳು ಭೀತಿಗೊಳಗಾಗಿದ್ದರು. ಮುಷ್ಕರ ನಿರತ ವೈದ್ಯರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಎರಡನೆ ದಿನ ಮುಷ್ಕರವನ್ನು ಖಾಸಗಿ ವೈದ್ಯರು ಮುಂದುವರಿಸಿದ್ದಾರೆ. ಹೀಗಾಗಿ ಆರೋಗ್ಯ ಸೇವೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಇದೇ ರೀತಿ ಮುಂದುವರಿದರೆ ಮತ್ತಷ್ಟು ಅನಾಹುತಗಳು ಉಂಟಾಗುವ ಸಾಧ್ಯತೆ ಇದೆ. ನರ್ಸಿಂಗ್ ಹೋಂಗಳು, ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಾದವರಿಗೆ ಚಿಕಿತ್ಸೆ ಮುಂದುವರಿಸಿರುವ ವೈದ್ಯರು ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ.

Facebook Comments

Sri Raghav

Admin