ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ವರದಿ ಬಂದ ತಕ್ಷಣ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Session-Siddaramaiah--01

ಬೆಳಗಾವಿ (ಸುವರ್ಣಸೌಧ), ನ.14- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆರನೇ ವೇತನ ಆಯೋಗದ ವರದಿ ಸಲ್ಲಿಕೆಯಾದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ರಾಯಭಾಗದ ಶಾಸಕ ಐಹೊಳೆ ಡಿ. ಮಹಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದ ನಡುವೆ ತಾರತಮ್ಯವಿರುವುದು ನಿಜ. ಅದನ್ನು ಸರಿಪಡಿಸಲು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಆರನೇ ವೇತನ ಆಯೋಗವನ್ನು 2017ರ ಜೂ.1 ರಂದು ರಚನೆ ಮಾಡಲಾಗಿದೆ. ಆರು ತಿಂಗಳೊಳಗಾಗಿ ಆಯೋಗ ವರದಿ ನೀಡಬೇಕಿತ್ತು. ಆದರೆ ಇನ್ನಷ್ಟು ಸಮಯಾವಕಾಶ ಕೇಳಿದ್ದರಿಂದ 2018ರ ಜನವರಿ 31ರವರೆಗೆ ಕಾಲಾವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಆರನೇ ವೇತನ ಆಯೋಗ ವರದಿ ಸಲ್ಲಿಕೆಯಾದ ತಕ್ಷಣ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ನಡುವೆ ಮಧ್ಯಂತರ ಪರಿಹಾರ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕಳೆದ ವರ್ಷ ಪೊಲೀಸರು ವೇತನ ಪರಿಷ್ಕರಣೆಗಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆಗಿನ ಗೃಹ ಸಚಿವ ಪರಮೇಶ್ವರ್, ಸುಮಾರು ಆರು ಭರವಸೆಗಳನ್ನು ನೀಡಿದ್ದರು. ಆದರೆ ಈವರೆಗೂ ಅವು ಈಡೇರಿಲ್ಲ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಉಪನಾಯಕ ವೈ.ಎಸ್.ವಿ.ದತ್ತ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಯವರು ಪೊಲೀಸರಿಗೆ ಒಂದೇ ವರ್ಷದಲ್ಲಿ 2 ಸಾವಿರ ವೇತನ ಹೆಚ್ಚಳ ಮಾಡಿದ್ದು ನಮ್ಮ ಸರ್ಕಾರ. ಇಪ್ಪತ್ತು ವರ್ಷಗಳಿಂದ ಬಡ್ತಿಯಿಲ್ಲದೆ ಕಾನ್‍ಸ್ಟೆಬಲ್‍ಗಳಾಗಿಯೇ ನಿವೃತ್ತರಾಗುತ್ತಿದ್ದವರಿಗೆ ಬಡ್ತಿ ನೀಡಲಾಗಿದೆ. ಇನ್ನು ಮುಂದೆ 12 ವರ್ಷಕ್ಕೊಮ್ಮೆ ಬಡ್ತಿ ನೀಡುವ ನಿಯಮ ರೂಪಿಸಲಾಗಿದೆ. ಇದರಿಂದ ಕಾನ್‍ಸ್ಟೆಬಲ್‍ನಿಂದ ಎಎಸ್‍ಐ, ಪಿಎಸ್‍ಐ ವರೆಗೂ ಮೇಲ್ದರ್ಜೆಗೇರುವ ಅವಕಾಶವಿದೆ. ಅಡ್ರ್ರಲಿ ಪದ್ಧತಿಯನ್ನು ರದ್ದುಗೊಳಿಸಿ ಆದೇಶ ನೀಡಲಾಗಿದೆ. ಆದರೆ ಇನ್ನೂ ಜಾರಿಯಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಕೇಂದ್ರ ಸರ್ಕಾರ 10 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುತ್ತದೆ. ರಾಜ್ಯ ಸರ್ಕಾರ ಐದಾರು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುವುದರಿಂದ ವೇತನದಲ್ಲಿ ತಾರತಮ್ಯ ಇದೆ ಎಂದು ಮುಖ್ಯಮಂತ್ರಿ ಹೇಳಿದರು. ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಇಲ್ಲ:
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕವಾಗಿ ಅಂತಿಮ ಪಟ್ಟಿಯಲ್ಲಿ ಹಸರಿರುವವರು ಹಂಚಿಕೆಯಾದ ಇಲಾಖೆಯಲ್ಲಿ ವರದಿ ಮಾಡಿಕೊಳ್ಳದೆ ಖಾಲಿ ಉಳಿಯುವ ಹುದ್ದೆಗಳನ್ನು ಮುಂದಿನ ವರ್ಷದ ರಿಕ್ತ ಸ್ಥಾನ ಎಂದು ಪರಿಗಣಿಸಿ ಆ ಹುದ್ದೆಗೂ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಆದರೆ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯಲ್ಲಿ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲು ಆಸ್ಪದ ಇಲ್ಲ. ಆದರೆ ಗ್ರೂಪ್ ಎ, ಬಿ, ಸಿ, ಡಿ ಹುದ್ದೆಗಳ ನೇಮಕಾತಿಯಲ್ಲಿ ಹೆಚ್ಚುವರಿ ಪಟ್ಟಿ ಪ್ರಕಟಿಸಲು ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಪರೀಕ್ಷೆ ನಡೆದಾಗ ಕೆಎಎಸ್, ಎಸಿ, ತಹಸೀಲ್ದಾರ್ ಹುದ್ದೆಗಳು ಸೇರಿ 14 ಇಲಾಖೆಗಳಿಗೆ ನೇಮಕಾತಿ ನಡೆಯುತ್ತದೆ. ಕೆಲವರು ಹಂಚಿಕೆಯಾದ ಇತರ ಇಲಾಖೆಗಳಿಗೆ ಸೇರುವುದಿಲ್ಲ. ಅಂತಹ ಹುದ್ದೆಗಳನ್ನು ಬಾಕಿ ಹುದ್ದೆಗಳೆಂದು ನೇಮಕಾತಿ ವೇಳೆ ಪರಿಗಣಿಸಲಾಗುವುದು ಎಂದು ಹೇಳಿದರು. ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಈಗಾಗಲೇ 2006 ಮತ್ತು 1997ರಲ್ಲಿ ಎರಡು ಬಾರಿ ನಿಯಮಗಳು ತಿದ್ದುಪಡಿಯಾಗಿದೆ. ಹೀಗಾಗಿ ಮತ್ತೊಮ್ಮೆ ತಿದ್ದುಪಡಿ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments

Sri Raghav

Admin