ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿ ಪಟ್ಟು, ಸದನದಲ್ಲಿ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

Session-Suvarns-Soudha--c-0

ಬೆಳಗಾವಿ, ನ.14- ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಪ್ರಕರಣದ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದಾಗ ಸದನದಲ್ಲಿ ಗದ್ದಲ-ಕೋಲಾಹಲ ಉಂಟಾಗಿ ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಕಲಾಪದ ನಂತರ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ರಾಜೀನಾಮೆ ನೀಡಬೇಕು. ಈ ಬಗ್ಗೆ ನಿಲುವಳಿ ಸೂಚನೆ ಪ್ರಾಥಮಿಕ ಪ್ರಸ್ತಾವನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಪ್ರಕರಣದಲ್ಲಿ ಸಚಿವ ಜಾರ್ಜ್ ಅವರು ಪ್ರಥಮ ಆರೋಪಿ ಎಂದು ಸಿಬಿಐ ಎಫ್‍ಐಆರ್ ದಾಖಲಿಸಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ತನಿಖೆ ಕೈಗೊಂಡಿದೆ. ಆರೋಪಿತರು ಸಚಿವ ಸ್ಥಾನದಲ್ಲಿದ್ದರೆ ಸಾಕ್ಷ್ಯಾಧಾರಗಳು ನಾಶವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವರು ರಾಜೀನಾಮೆ ನೀಡಬೇಕು.

ಪ್ರಕರಣ ಸಂಬಂಧ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ವಿಶೇಷ ಪ್ರಕರಣವೆಂದು ಪರಿಗಣಿಸಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆಗ ಕ್ರಿಯಾಲೋಪವೆತ್ತಿದ ಸಚಿವ ಟಿ.ಬಿ.ಜಯಚಂದ್ರ ಪ್ರಶ್ನೋತ್ತರ ಕಲಾಪದ ನಂತರ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ನಿಯಮದಲ್ಲಿ ಅವಕಾಶವಿಲ್ಲ. ಸಿಬಿಐ ತನಿಖೆ ನಡೆಸುತ್ತಿದೆ. ತನಿಖೆಯ ಹಂತದಲ್ಲಿರುವಾಗ ಇಲ್ಲಿ ಚರ್ಚೆ ಮಾಡಲು ಬರುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಟಿ.ಬಿ.ಜಯಚಂದ್ರ ಅವರ ಪರವಾಗಿ ಸಚಿವರಾದ ಯು.ಟಿ.ಖಾದರ್, ರೋಷನ್ ಬೇಗ್, ದೇಶಪಾಂಡೆ, ಶಾಸಕ ಎಸ್.ಟಿ.ಸೋಮಶೇಖರ್, ನರೇಂದ್ರ ಸ್ವಾಮಿ ಮುಂತಾದವರು ಬೆಂಬಲಕ್ಕೆ ನಿಂತರೆ ಶೆಟ್ಟರ್ ಅವರ ಪರವಾಗಿ ಸುರೇಶ್‍ಕುಮಾರ್, ಸುನಿಲ್‍ಕುಮಾರ್ ಮುಂತಾದ ಶಾಸಕರು ಬೆಂಬಲಕ್ಕೆ ನಿಂತರು. ಪ್ರತಿಪಕ್ಷದವರು ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿದರೆ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಸತ್ಯಾಂಶ ಹೊರಬರಬೇಕು. ಇದಕ್ಕಾಗಿ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದ ಶೆಟ್ಟರ್ ಹಾಗೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಲು ಮುಂದಾದರು.

ಈ ಸಂದರ್ಭದಲ್ಲೂ ಕೂಡ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲದ ವಾತಾವರಣ ಉಂಟಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರತಿಪಕ್ಷಗಳಿಗೆ ಸಮಸ್ಯೆ ಪರಿಹರಿಸಿಕೊಳ್ಳುವ ಅಗತ್ಯವಿಲ್ಲ. ಪ್ರಚಾರಕ್ಕಾಗಿ ಈ ರೀತಿ ಗದ್ದಲ ಉಂಟುಮಾಡುತ್ತಿದ್ದಾರೆ. ಅಧಿವೇಶನ ಅರ್ಥಪೂರ್ಣವಾಗಿ ನಡೆಯಬೇಕೆಂಬುದು ನಮ್ಮ ಆಶಯ. ಉತ್ತರ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ. ಇವರ ಈ ನಿಲುವಳಿ ಸೂಚನೆಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು.

ಸಚಿವ ಟಿ.ಬಿ.ಜಯಚಂದ್ರ ಅವರು ಕೂಡ ಬಿಜೆಪಿಯವರ ಮನವಿಯಲ್ಲಿ ಸಾರ್ವಜನಿಕರ ಹಿತಾಸಕ್ತಿ ಇಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮದು ಸಾರ್ವಜನಿಕ ಹಿತಾಸಕ್ತಿ, ನಿಮ್ಮದು ವೈಯಕ್ತಿಕ ಹಿತಾಸಕ್ತಿ ಎಂದು ಸುರೇಶ್‍ಕುಮಾರ್ ಮುಂತಾದವರು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಸದನದಲ್ಲಿ ಮತ್ತೆ ಗದ್ದಲದ ವಾತಾವರಣ ಉಂಟಾಯಿತು. ಸಭಾಪತಿ ಕೆ.ಬಿ.ಕೋಳಿವಾಡ ಅವರು ಬಿಜೆಪಿಯವರ ನಿಲುವಳಿ ಸೂಚನೆ ಮನವಿಯನ್ನು ತಿರಸ್ಕರಿಸಿದರು. ಗಲಾಟೆ ಮುಂದುವರಿದ ಹಿನ್ನೆಲೆಯಲ್ಲಿ ಸದನವನ್ನು ಕೆಲಕಾಲ ಮುಂದೂಡಿದರು.

Facebook Comments

Sri Raghav

Admin