ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆಗೆ ಶಾಸಕರ ಪಕ್ಷಾತೀತ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

basava

ಬೆಳಗಾವಿ(ಸುವರ್ಣಸೌಧ), ನ.15- ಅತಿಥಿ ಉಪನ್ಯಾಸಕರಿಗೆ 6 ತಿಂಗಳ ಬಾಕಿ ಇರುವ ವೇತನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ವಿಧಾನಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಒತ್ತಾಯಿಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕ ಜೆ.ಆರ್.ಲೋಬೋ ಅವರು ಪ್ರಶ್ನೆಯೊಂದನ್ನು ಕೇಳಿ ಪದವಿ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಎಷ್ಟು ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೇಳಿದರು.

ಇದಕ್ಕೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಪದವಿ ಕಾಲೇಜುಗಳಲ್ಲಿ ಒಬ್ಬ ಉಪನ್ಯಾಸಕನೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿಲ್ಲ. ಹೊರ ಗುತ್ತಿಗೆಯಲ್ಲೂ ನೇಮಕ ಮಾಡಿಲ್ಲ ಎಂದರು. ಹಾಗಿದ್ದರೆ 9 ತಿಂಗಳ ಅವಧಿಗೆ ಬೋಧನೆ ಮಾಡಲು ಬರುತ್ತಿರುವ ಉಪನ್ಯಾಸಕರನ್ನು ಏನೆಂದು ಕರೆಯುತ್ತೀರಿ ಎಂದು ಶಾಸಕರು ಪ್ರಶ್ನಿಸಿದರು. ಅವರು ಗುತ್ತಿಗೆ ಉಪನ್ಯಾಸಕರಲ್ಲ. ಅತಿಥಿ ಉಪನ್ಯಾಸಕರು. ಪ್ರಶ್ನೆ ಅಸ್ಪಷ್ಟವಾಗಿದೆ. ಉತ್ತರ ಅಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು. ಅತಿಥಿ ಉಪನ್ಯಾಸಕರಿಗೆ 6 ತಿಂಗಳಿ ನಿಂದಲೂ ವೇತನ ನೀಡಿಲ್ಲ ಎಂದು ಶಾಸಕ ಲೋಬೋ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ. ಒಂದೇ ಕಾಲೇಜಿನಲ್ಲಿ ಒಂದೇ ವಿಷಯದಲ್ಲಿ ಪಾಠ ಮಾಡುವ ಅತಿಥಿ ಉಪನ್ಯಾಸಕರಿಗೆ ಒಂದು ರೀತಿ ಖಾಯಂ ಉಪನ್ಯಾಸಕರಿಗೆ ಮತ್ತೊಂದು ರೀತಿಯ ವೇತನ ಇದೆ. ಅತಿಥಿ ಉಪನ್ಯಾಸಕರ ನಡುವೆಯೂ ವೇತನ ತಾರತಮ್ಯಗಳಿವೆ. ಇದನ್ನು ಸರಿಪಡಿಸಿ ಎಂದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ನಿಮಗೆ ತಿಂಗಳಿಗೆ ಸರಿಯಾಗಿ ವೇತನ ಬರುತ್ತಿಲ್ಲವೆ, ಹಾಗಿದ್ದ ಮೇಲೆ ಅತಿಥಿ ಉಪನ್ಯಾಸಕರಿಗೆ ಏಕೆ ವೇತನ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ನಾನು ವೇತನವನ್ನೇ ಪಡೆಯು ವುದಿಲ್ಲ ಎಂದು ಸಚಿವ ರಾಯರೆಡ್ಡಿ ತಿರುಗೇಟು ನೀಡಿದರು. ನಿಮಗೆ ಬೇರೆ ಬೇರೆ ಮೂಲಗಳಿಂದ ಆದಾಯ ಇರಬಹುದು. ಹಾಗಾಗಿ ವೇತನ ಪಡೆಯುತ್ತಿಲ್ಲ. ಆದರೆ, ಉಪನ್ಯಾಸಕರ ಸ್ಥಿತಿ ಹಾಗಿರುವುದಿಲ್ಲ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು. ಬಿಜೆಪಿ ಶಾಸಕ ಅಪ್ಪಚ್ಚುರಂಜನ್ ಪ್ರಶ್ನೆ ಕೇಳಿದ ಆಡಳಿತ ಪಕ್ಷದ ಶಾಸಕ ಲೋಬೋ ಅವರ ಪರವಾಗಿ ಮಾತನಾಡಿ, ಶಾಸಕರ ಪ್ರಶ್ನೆಗೆ ಸಚಿವರು ಸಮಾಧಾನದಿಂದ ಉತ್ತರ ನೀಡಬಹುದಿತ್ತು. ಈಗ ನೀಡುವ ಉತ್ತರ ಉದ್ದಟತನದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇತನ ಬಿಡುಗಡೆ ಬಗ್ಗೆ ಬಹುತೇಕ ಶಾಸಕರು ಒತ್ತಾಯಿಸಿದಾಗ ಮಾತನಾಡಿದ ಸಚಿವ ರಾಯರೆಡ್ಡಿ, ಸುಮಾರು 20 ವರ್ಷ ಗಳಿಂದಲೂ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಪಿಎಚ್‍ಡಿ, ಎನ್‍ಇಟಿ ಪದವಿಗಳು ಕಡ್ಡಾಯ ಇರಲಿಲ್ಲ. ಇತ್ತೀಚೆಗೆ ಯುಜಿಸಿ ಹೊಸ ನಿಯಮಾವಳಿಗಳನ್ನು ಮಾಡಿ ಸ್ನಾತಕೋತ್ತರ ಪದವೀಧರರಿಗೆ ಒಂದು ರೀತಿಯ ವೇತನ, ಪಿಎಚ್‍ಡಿ, ಎನ್‍ಇಟಿಯಂತಹ ಪದವಿ ಪಡೆದವರಿಗೆ ಮತ್ತೊಂದು ರೀತಿಯ ವೇತನ ನಿಗದಿ ಮಾಡಿದೆ. ಹೀಗಾಗಿ ತಾರತಮ್ಯ ಇದೆ. ಹಿಂದೆ ಕೆಲಸ ಮಾಡತ್ತಿದ್ದ ಸ್ನಾತಕೋತ್ತರ ಪದವೀಧರರು ಹೆಚ್ಚುವರಿ ಪದವಿ ಪಡೆದರೆ ನಿಯಮಾನುಸಾರ ವೇತನ ನೀಡಲಾಗುವುದು ಎಂದು ಹೇಳಿದರು. ಚರ್ಚೆಯಲ್ಲಿ ಬಹಳಷ್ಟು ಶಾಸಕರು ಭಾಗವಹಿಸಿದ್ದರಿಂದ ಪ್ರಶ್ನೋತ್ತರದಲ್ಲಿನ ವಿಷಯವನ್ನು ಸಭಾಧ್ಯಕ್ಷರು ಅರ್ಧಗಂಟೆ ಚರ್ಚೆಗೆ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದರು.

Facebook Comments

Sri Raghav

Admin