ಕ್ಯಾಲಿಫೋರ್ನಿಯಾದಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಬಂದೂಕುಧಾರಿ, ನಾಲ್ಕು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

colly

ಲಾಸ್ ಏಂಜಲಸ್, ನ.15- ಅಪರಿಚಿತ ಬಂದೂಕು ಧಾರಿಯೊಬ್ಬ ಯದ್ವತದ್ವಾ ಗುಂಡು ಹಾರಿಸಿ ನಾಲ್ವರನ್ನು ಸ್ಥಳದಲ್ಲೇ ಹತ್ಯೆ ಮಾಡಿ ಇಬ್ಬರು ಮಕ್ಕಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿರುವ ಘಟನೆ ಉತ್ತರ ಕ್ಯಾಲಿಫೋರ್ನಿಯಾದ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಇಂದು ಬೆಳಗ್ಗೆ 8 ಗಂಟೆಗೆ (ಸ್ಥಳೀಯ ಕಾಲಮಾನ) ಒಂದು ಪ್ರಾಥಮಿಕ ಶಾಲೆಯೂ ಸೇರಿದಂತೆ ಇತರ ಕೆಲವು ಪ್ರದೇಶಗಳಲ್ಲಿ ಈ ಅಪರಿಚಿತ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದು, ಗಾಯಾಳುಗಳನ್ನು ದಾಖಲಿಸಲಾಗಿದೆ. ಗಾಯಗೊಂಡಿರುವವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿರುವ ತೆಹಾಮಾ ಪ್ರಾಂತ್ಯದ ಹಿರಿಯ ಅಧಿಕಾರಿ ಫಿಲ್ ಜಾನ್‍ಸ್ಪನ್, ಯಾತಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಹಿಂಸಾಚಾರ ನಡೆಸಿದ ಅಪರಿಚಿತ ಬಂದೂಕುಧಾರಿಯನ್ನು ಪೊಲೀಸರು ಹೊಡೆದು ಕೆಡವಿದ್ದಾರೆ. ಅದೃಷ್ಟವಶಾತ್ ಮೃತಪಟ್ಟಿರುವವರಲ್ಲಿ ಶಾಲಾ ಮಕ್ಕಳು ಯಾರೂ ಇಲ್ಲ. ಮೃತರೆಲ್ಲರೂ ದೊಡ್ಡವರೇ ಆಗಿದ್ದಾರೆ. ದಾಳಿಯ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಹಳೆ ವೈಷಮ್ಯವಾದ ಕಾರಣದಿಂದ ವ್ಯಕ್ತಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ಪುಟ್ಟ ಮಕ್ಕಳಲ್ಲಿ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಈ ಮಗುವನ್ನು ಅದರ ತಾಯಿ ಕಾರಿನಲ್ಲಿ ಶಾಲೆಗೆ ಕರೆತರುತ್ತಿದ್ದಾಗ ಈ ಘಟನೆ ನಡೆದಿದ್ದು, ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಾಯಿ-ಮಗು ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಇದು ಉಗ್ರರ ಕೃತ್ಯವಲ್ಲ ಎಂಬುದಂತೂ ಸ್ಪಷ್ಟವಾಗಿದೆ ಎಂದು ಫಿಲ್ ಜಾನ್‍ಸ್ಪನ್ ತಿಳಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಮಿಲಿಟರಿ ಸಮಸ್ತ್ರ ಧರಿಸಿದ್ದು, ನಿಜಕ್ಕೂ ಅವನು ಯಾರು, ಯಾತಕ್ಕಾಗಿ ಈ ದಾಂಧಲೆ ನಡೆಸಿದ ಎಂಬುದು ಇನ್ನಷ್ಟೇ ನಿಚ್ಚಳವಾಗಬೇಕಾಗಿದೆ. ನಾಲ್ವರು ಮೃತರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾಳೆ. ಇತ್ತೀಚೆಗೆ ಅಮೆರಿಕದ ವಿವಿಧೆಡೆ ಉಗ್ರರ ನರಮೇಧ ಕೃತ್ಯಗಳು ಹೆಚ್ಚುತ್ತಿರುವುದರಿಂದ ನಾಗರಿಕರು ಈ ಘಟನೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ.

Facebook Comments

Sri Raghav

Admin