ರಾಜ್ಯದಲ್ಲಿ ನೆಲೆಸಿರುವ ವಲಸಿಗರ ಬಗ್ಗೆ ತನಿಖೆ ನಡೆಸಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy-Session--01

ಬೆಳಗಾವಿ,ನ.15-ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೆಲೆಸಿರುವ ವಲಸಿಗರ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.  ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ಡಿ.ಎನ್.ಜೀವರಾಜ್, ಲಕ್ಷ್ಮಣ್ ಸವದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಂಗ್ಲಾ ದೇಶಿಗರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಅಂಥವರನ್ನು ಪತ್ತೆಹಚ್ಚಿ ಅವರು ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ಮತ್ತು ಆಧಾರ್ ಕಾರ್ಡ್ ನೋಂದಣಿ ಮಾಡಿಸದಂತೆ ಕ್ರಮ ಕೈಗೊಳ್ಳುವಂತೆ ಎಸ್ಪಿಗಳಿಗೆ ಆದೇಶಿಸಲಾಗುವುದು ಎಂದರು.

ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಪಟ್ಟಿಗೆ ಸೇರ್ಪಡೆಯಾಗಿರುವವರನ್ನು ಪಟ್ಟಿಯಿಂದ ತೆಗೆಯಲು ಸೂಚಿಸಲಾಗಿದೆ. ಆದರೆ ಪದೇ ಪದೇ ತಪ್ಪು ಎಸಗುತ್ತಿರುವವರನ್ನು ರೌಡಿ ಪಟ್ಟಿಗೆ ಸೇರಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಶಾಸಕ ಜೀವರಾಜ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವವರು ಅಸ್ಸಾಂನವರು ಎಂದು ಹೇಳಲಾಗುತ್ತಿದೆ. ಆದರೆ ಅವರು ಬಾಂಗ್ಲಾದವರು ಎಂಬ ಅನುಮಾನವಿದೆ. ಅವರುಗಳ ಹೆಸರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿ ಮತ್ತು ಆಧಾರ್ ಕಾರ್ಡ್‍ನಲ್ಲಿ ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಸತೀಶ್ ರೆಡ್ಡಿ , ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಬಂದವರು ಅಲ್ಲಿಯೇ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ ಎಂದರು. ಮತ್ತೊಬ್ಬ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ, ಬೆಳಗಾವಿ ನಗರದಲ್ಲಿ ಬಾಂಗ್ಲಾದವರು ನೆಲೆಸಿದ್ದಾರೆಂಬ ಮಾಹಿತಿಯಿದ್ದು , ಅಂಥವರ ಹೆಸರು ಮತದಾರರ ಪಟ್ಟಿ ಮತ್ತು ಆಧಾರ್‍ನಲ್ಲಿ ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ , ಚಿಕ್ಕಮಗಳೂರು, ಬೆಳಗಾವಿ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin