ವೈದ್ಯರ ಹಠಕ್ಕೆ ಮಣಿದ ಸರ್ಕಾರ, ಖಾಸಗಿ ವೈದ್ಯಕೀಯ ಕಾಯ್ದೆ ತಿದ್ದುಪಡಿಗೆ ಬ್ರೇಕ್ ..?

ಈ ಸುದ್ದಿಯನ್ನು ಶೇರ್ ಮಾಡಿ

Doctor--02

ಬೆಳಗಾವಿ (ಸುವರ್ಣಸೌಧ), ನ.15- ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಮಸೂದೆ ನೆನೆಗುದಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆಯೇ ನಡೆಯಲಿಲ್ಲ. ಸುವರ್ಣಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ವಿಧೇಯಕದ ಬಗ್ಗೆ ಶಾಸಕರು ಯಾವುದೇ ಚರ್ಚೆ ಮಾಡುವುದು ಬೇಡ. ನಾನು ಆರೋಗ್ಯ ಸಚಿವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಆರಂಭಿಕವಾಗಿಯೇ ಈ ವಿಧೇಯಕಕ್ಕೆ ವಿಘ್ನ ಎದುರಾದಂತಾಯಿತು.

ಸಭೆ ನಂತರ ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರು ಕೂಡ ಹತಾಶ ಭಾವನೆ ವ್ಯಕ್ತಪಡಿಸಿದರು. ಏನಾದರೂ ಆಗಲಿ ನಾನು ಈ ವಿಧೇಯಕವನ್ನು ಜಾರಿಗೆ ತರುತ್ತೇನೆ ಎಂದು ಹೇಳುತ್ತಿದ್ದ ಸಚಿವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿದ್ದಾಗ ನೀವು ಏನನ್ನು ಕೇಳುವುದಿದ್ದರೂ ನಮ್ಮ ಶಾಸಕಾಂಗ ಪಕ್ಷದ ನಾಯಕರನ್ನೇ ಕೇಳಿ. ಈ ಬಗ್ಗೆ ನಾನು ಏನೂ ಹೇಳಲಾರೆ ಎಂಬ ಹತಾಶೆ ವ್ಯಕ್ತಪಡಿಸುತ್ತಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸುತ್ತಿದ್ದರೆ ಖಾಸಗಿ ಆಸ್ಪತ್ರೆಗಳವರ ಲಾಬಿಗೆ, ಪ್ರತಿಪಕ್ಷಗಳವರ ಪ್ರತಿಭಟನೆಗೆ ಸರ್ಕಾರ ಮಣಿದಂತೆ ಕಂಡುಬಂದಿದೆ.  ಖಾಸಗಿ ಆಸ್ಪತ್ರೆಗಳವರ ಆಟಾಟೋಪಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದ ಸರ್ಕಾರ ಈಗ ಸಾರಾಸಗಟಾಗಿ ಸುಮ್ಮನಾಗಿರುವುದು ಕಾಣುತ್ತಿವೆ. ಆರೋಗ್ಯ ಸಚಿವರೇ ಈ ವಿಷಯದ ಬಗ್ಗೆ ನಮ್ಮ ನಾಯಕರನ್ನು ಕೇಳಿ ಎಂದು ಹೇಳಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯಬೇಕಿತ್ತು. ಆದರೆ, ಆರಂಭದಲ್ಲೇ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದು ಶಾಸಕರಿಗೆ ತಾಕೀತು ಮಾಡಿದ್ದಲ್ಲದೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು. ನಾವು ಇಲ್ಲಿ ಚರ್ಚೆ ಮಾಡಿದರೆ ಬೇರೆ ಸಂದೇಶ ಹೋಗುತ್ತದೆ. ಇಲ್ಲಿ ಚರ್ಚಿಸುವುದು ಬೇಡ ಎಂಬ ಸೂಚನೆ ನೀಡಿದರು. ಈ ಮೂಲಕ ಈ ವಿಧೇಯಕ ಡೋಲಾಯಮಾನದ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ. ಈ ವಿಧೇಯಕ ವಿರೋಧಿಸಿ ವೈದ್ಯರುಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ವೈದ್ಯರುಗಳಿಲ್ಲದೆ ಹಲವಾರು ಸಾವು-ನೋವುಗಳು ಸಂಭವಿಸಿವೆ. ಸರ್ಕಾರಕ್ಕೆ ಇವರ ಪ್ರತಿಭಟನೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ವೈದ್ಯರು ನಿನ್ನೆಯಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸರ್ಕಾರ ಈ ಹಂತದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾದರೆ ಹೇಗೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದು, ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು, ಹಲವು ಹಿರಿಯ ಸಚಿವರು ಚರ್ಚೆ ನಡೆಸಿ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin