2013ರಿಂದ ಈ ವರೆಗೂ 56,982 ಮಂದಿಗೆ ‘ಶಾದಿ ಭಾಗ್ಯ’ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

thanveer

ಬೆಳಗಾವಿ(ಸುವರ್ಣಸೌಧ), ನ.15- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಾದಿಭಾಗ್ಯ ಯೋಜನೆಯಡಿ 2013ರಿಂದ ಈ ವರೆಗೂ 56982 ಮಂದಿಗೆ ಸೌಲಭ್ಯ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್‍ಸೇಠ್ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಗೋವಿಂದ ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿದ ಅವರು. ಈವರೆಗೂ 74266 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 56982 ಮಂದಿಗೆ ಸೌಲಭ್ಯ ನೀಡಲು 135 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 3514 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 13770 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ವಿವರಿಸಿದರು.

ಸಚಿವರ ಉತ್ತರ ತಮಗೆ ತೃಪ್ತಿ ತಂದಿಲ್ಲ. 56982 ಮಂದಿಗೆ ತಲಾ 50 ಸಾವಿರ ನೆರವು ನೀಡಲು ಕನಿಷ್ಠ 280 ಕೋಟಿ ಬೇಕಿದೆ. ಆದರೆ, ರಾಜ್ಯ ಸರ್ಕಾರ 150 ಕೋಟಿ ಮಾತ್ರ ನೀಡಿದೆ. ಶಾದಿಭಾಗ್ಯ ಯೋಜನೆ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಸವರುತ್ತಿದೆ. ಆಸೆ ತೋರಿಸಿ ಬಡವರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಚಿವರು ಯೋಜನೆ ಜಾರಿಯಾಗುವಾಗ ಪ್ರತಿಭಟನೆ ನಡೆಸಿದ ಬಿಜೆಪಿಯವರೇ ಈಗ ಯೋಜನೆಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರಲ್ಲದೆ, ಶಾದಿಭಾಗ್ಯ ಯೋಜನೆಯಡಿ ಬಾಕಿ ಇರುವ ಅನುದಾನವನ್ನು ಜನವರಿ ಅಂತ್ಯದೊಳಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಗೋವಿಂದ ಕಾರಜೋಳ ಪದೇ ಪದೇ ಪ್ರಶ್ನೆಗಳನ್ನು ಕೇಳಿ ಬಾಕಿ ಅನುದಾನ ಬಿಡುಗಡೆ ಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದೇ ಪ್ರಶ್ನೆಗೆ ಎಷ್ಟು ಬಾರಿ ಸ್ಪಷ್ಟನೆ ಕೇಳುತ್ತೀರಾ ಎಂದು ಹೇಳುವ ಮೂಲಕ ಚರ್ಚೆಯನ್ನು ತಣ್ಣಗಾಗಿಸಿದರು.

Facebook Comments

Sri Raghav

Admin