ಒಗ್ಗದ ಉತ್ತರ ಕರ್ನಾಟಕದ ಊಟ, ಬೆಳಗಾವಿಯಲ್ಲಿ 20ಕ್ಕೂ ಹೆಚ್ಚು ಪತ್ರಕರ್ತರು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

North-Karnataka--202

ಬೆಳಗಾವಿ, ನ.16- ಕೆಪಿಎಂಇ ಕಾಯ್ದೆ ವಿರೋಧಿಸಿ ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೆ ಅಧಿವೇಶನದ ವರದಿ ಮಾಡಲು ಕುಂದಾನಗರಿಗೆ ತೆರಳಿದ್ದ ಬೆಂಗಳೂರಿನ 20ಕ್ಕೂ ಹೆಚ್ಚು ಪತ್ರಕರ್ತರು ಅಸ್ವಸ್ಥಗೊಂಡಿದ್ದಾರೆ. ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕ ಮಾದರಿಯ ಅಡುಗೆ ಹಿಡಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ 20ಕ್ಕೂ ಹೆಚ್ಚು ಪತ್ರಕರ್ತರಿಗೆ ವಾಂತಿ-ಬೇಧಿ, ಜ್ವರ ಕಾಣಿಸಿಕೊಂಡಿದೆ.

ಅಧಿವೇಶನ ಆರಂಭವಾದ ದಿನದಿಂದಲೂ ಪತ್ರಕರ್ತರು ಅಸ್ವಸ್ಥಗೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆಯಿಲ್ಲದೆ ನರಳಾಡುವಂತಾಗಿದೆ. ಸುವರ್ಣಸೌಧದಲ್ಲಿ ತಯಾರಿಸಿದ ಉತ್ತರ ಕರ್ನಾಟಕ ಮಾದರಿ ಊಟ ಸೇವಿಸಿದ ನಂತರ ಪತ್ರಕರ್ತರಿಗೆ ವಾಂತಿ-ಬೇಧಿ ಆರಂಭವಾಗಿರುವುದರಿಂದ ಸಭಾಧ್ಯಕ್ಷರು ಸೂಕ್ತ ಊಟ-ತಿಂಡಿ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ವರದಿಗಾರರ ಬೇಡಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ವೃತ್ತಿ ಜೀವನ ನಡೆಸುತ್ತಿರುವ ಪತ್ರಕರ್ತರು ಏಕಾಏಕಿ ಬೆಳಗಾವಿಯ ಊಟ-ತಿಂಡಿ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟ. ಆದರೂ ಅನಿವಾರ್ಯವಾಗಿ ಹೊಂದಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಅನಾರೋಗ್ಯಕ್ಕೆ ತುತ್ತಾಗಿರುವ ಪತ್ರಕರ್ತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ನಡೆಸುತ್ತಿರುವ ಮುಷ್ಕರ ಅಡ್ಡಿಯಾಗಿದೆ. ಆದರೂ ವಾರ್ತಾ ಇಲಾಖೆಯವರ ಪ್ರಥಮ ಚಿಕಿತ್ಸೆ ಪಡೆದು ಕೆಲಸ ಮಾಡಬೇಕಾಗಿದೆ. ಕೆಲ ಪತ್ರಕರ್ತರ ಸ್ಥಿತಿಯಂತೂ ತೀರ ಬಿಗಡಾಯಿಸಿದ್ದು, ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಪತ್ರಕರ್ತ ಸಮೂಹದ ಆಗ್ರಹವಾಗಿದೆ. ಕೆಲ ವರ್ಷಗಳ ಹಿಂದೆ ಬೆಳಗಾವಿ ಅಧಿವೇಶನದ ವರದಿಗೆ ತೆರಳಿದ್ದ ಬೆಂಗಳೂರಿನ ಆಂಗ್ಲ ಮಾಧ್ಯಮದ ವರದಿಗಾರರಾಗಿದ್ದ ಎನ್.ಡಿ.ಶಿವಕುಮಾರ್ ಅವರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments

Sri Raghav

Admin