ಕೆಎಸ್‍ಆರ್‍ಟಿಸಿ ಬಸ್ ಬೈಕ್‍ಗೆ ಡಿಕ್ಕಿ: ಒಂದೇ ಕುಟುಂಬದ ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--02

ಕೊಳ್ಳೇಗಾಲ, ನ.16-ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಹಾಗೂ ಪತ್ನಿಯನ್ನು ಬೈಕ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮನೆಗೆ ವಾಪಸ್ಸಾಗುತ್ತಿದ್ದಾಗ ಹಿಂದಿನಿಂದ ಬೈಕ್‍ಗೆ ಅತಿವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯರಿಯೂರು ಗ್ರಾಮದ ರಾಜಮ್ಮ, ಇವರ ಮಗ ಸತೀಶ, ಸೊಸೆ ಬಿಂದು ಮೃತಪಟ್ಟ ದುರ್ದೈವಿಗಳು. ಆರು ತಿಂಗಳ ಹಿಂದಷ್ಟೆ ಸತೀಶ -ಬಿಂದು ಅವರ ವಿವಾಹವಾಗಿದ್ದು, ಕಳೆದೆರಡು ದಿನಗಳಿಂದ ತಾಯಿ ರಾಜಮ್ಮ ಹಾಗೂ ಪತ್ನಿ ಬಿಂದು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸತೀಶ ತನ್ನ ಬೈಕ್‍ನಲ್ಲಿ ತಾಯಿ ಹಾಗೂ ಪತ್ನಿಯನ್ನು ಯಳಂದೂರು ಆಸ್ಪತ್ರೆಗೆ ಕರೆತಂದು ರಾತ್ರಿ 8.30ರಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಚಾಮರಾಜನಗರ ಕಡೆಯಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಯರಿಯೂರು ಕ್ರಾಸ್ ಬಳಿ ಹಿಂದಿನಿಂದ ಅತಿ ವೇಗವಾಗಿ ಇವರ ಬೈಕ್‍ಗೆ ಡಿಕ್ಕಿ ಹೊಡೆದು ಮೂವರನ್ನು ಸ್ವಲ್ಪ ದೂರ ಎಳೆದೊಯ್ದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆ ಸುದ್ದಿ ತಿಳಿದ ಯರಿಯೂರು ಗ್ರಾಮಸ್ಥರು, ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಯಳಂದೂರು ಠಾಣೆ ಸಿಪಿಐ ರಾಜೇಶ್, ಪಿಎಸ್‍ಐ ಮಂಜು ಸ್ಥಳಕ್ಕಾಗಮಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin