ಬಸ್-ಶಾಲಾ ವಾಹನ ನಡುವೆ ಭೀಕರ ಅಪಘಾತ : 3 ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

kanaka

ಕನಕಪುರ, ನ.16-ಸರ್ಕಾರಿ ಬಸ್ ಹಾಗೂ ಶಾಲಾ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಶಾಲಾ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಗ್ಗೆ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಅವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಶೀತಲವಾಡಿ, ಜಟ್ಟಿಪಾಳ್ಯ, ಕತರಿನಾಥ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳನ್ನು ಎಂದಿನಂತೆ ಶಾಲಾ ವಾಹನದಲ್ಲಿ 9.15ರಲ್ಲಿ ಅನ್ನಪೂರ್ಣೇಶ್ವರಿ ಆಶ್ರಮದ ಶಾಲೆಗೆ ಕರೆದುಕೊಂಡು ಬರಲಾಗುತ್ತಿತ್ತು.

ತೇರುಬೀದಿ ಕಡೆಯಿಂದ ಕನಕಪುರಕ್ಕೆ ವಾಪಸ್ಸಾಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಹಾರೋಹಳ್ಳಿ ಬಳಿ ಅತಿ ವೇಗವಾಗಿ ಮುನ್ನುಗ್ಗಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲ ಗ್ರಾಮದವರು ಸ್ಥಳಕ್ಕೆ ದೌಡಾಯಿಸಿ ವಾಹನದಲ್ಲಿ ಸಿಲುಕಿದ್ದ ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮಾರ್ಗಮಧ್ಯೆ ಮತ್ತೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು, ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಬಳಿ ರೋದಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.  ಸುದ್ದಿ ತಿಳಿದ ಹಾರೋಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

kanaka-2

Facebook Comments