ವೈದ್ಯರ ಮುಷ್ಕರ : ತುರುವೇಕೆರೆಯಲ್ಲಿ ಚಿಕಿತ್ಸೆಗೆ ಪರದಾಡಿದ ರೋಗಿಗಳು

ಈ ಸುದ್ದಿಯನ್ನು ಶೇರ್ ಮಾಡಿ

tu-doc

ತುರುವೇಕೆರೆ, ನ.16-ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ವಿಧೇಯಕಕ್ಕೆ ಸೂಕ್ತ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ವೈದ್ಯರು ನಡೆಸುತ್ತಿದ್ದ ಮುಷ್ಕರ ನಾಲ್ಕನೆಯ ದಿನಕ್ಕೆ ಕಾಲಿಟ್ಟಿದ್ದು, ವೈದ್ಯರು ಮತ್ತು ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ರೋಗಿಗಳು ಚಿಕಿತ್ಸೆಗಾಗಿ ನಿತ್ಯ ಪರಿತಪಿಸುವ ಸ್ಥಿತಿ ಎದುರಾಗಿದೆ. ಪಟ್ಟಣದಲ್ಲಿ ಎಂಟು ಜನರಲ್ ಕ್ಲಿನಿಕ್, ಎರಡು ಆಸ್ಪತ್ರೆ, ಎರಡು ಮಕ್ಕಳ ತಜ್ಞರ ಖಾಸಗಿ ಕ್ಲಿನಿಕ್ ಸೇರಿದಂತೆ ತಾಲ್ಲೂಕಿನ ದಂಡಿನಶಿವರದಲ್ಲಿ ಒಂದು ಕ್ಲಿನಿಕ್ ಇದೆ.

ವೃದ್ದರು, ಬಾಣಂತಿಯರು, ಗಭಿರ್ಣಿಯರು, ಅಂಗವಿಕಲರು ಮತ್ತು ಚಿಕ್ಕಪುಟ್ಟ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ತೋರಿಸಲು ಕಳೆದ ಮೂರು ದಿನಗಳಿಂದ ಎಡತಾಕುತ್ತಿದ್ದಾರೆ. ತಾಲ್ಲೂಕಿನ ದೂರದ ಹಳ್ಳಿಗಳಿಂದ ಬರುವ ರೋಗಿಗಳು ಊಟ, ನೀರು ಇಲ್ಲದೆ ಬೆಳಗಿನಿಂದ ಸಂಜೆಯ ತನಕ ಆಸ್ಪತ್ರೆಯ ಎದುರು ನಿರೀಕ್ಷೆಯಲ್ಲಿ ಕಾದು ಹೈರಾಣಾಗುವಂತಾಗಿದೆ. ಇನ್ನು ಆಸ್ಪತ್ರೆಯ ವೈದ್ಯರುಗಳಿಗೆ ರೋಗಿಗಳು ದೂರವಾಣಿ ಕರೆ ಮಾಡಿದರೆ ಕರೆಯನ್ನು ಸಹ ಸ್ವೀಕರಿಸುತ್ತಿಲ್ಲ ಎನ್ನುವುದು ರೋಗಿಗಳ ಅಳಲು. ದೊಡ್ಡವರಾದರೆ ಖಾಯಿಲೆಯನ್ನು ತಡೆದುಕೊಳ್ಳುವ ಶಕ್ತಿ ಇರುತ್ತದೆ. ಆದರೆ ಆರು ತಿಂಗಳ ಎಳೆ ಮಗುವಿಗೆ ಮೂರು ದಿನದಿಂದ ಜ್ವರ, ಭೇದಿಯಾಗುತ್ತಿದೆ. ಖಾಸಗಿ ಆಸ್ಪತ್ರೆಗೆ ತೋರಿಸೋಣ ಅಂತಾ ತುರುವೇಕೆರೆಗೆ ಬಂದಿದ್ದೀವಿ ಡಾಕ್ಟ್ರು ಮೂರು ದಿನದಿಂದ ಬಂದಿಲ್ಲವಂತೆ. ನನ್ನ ಮಗಿನ ಗತಿ ಏನು ಸ್ವಾಮಿ ಎಂದು ಮಗುವಿನ ತಾಯಿ ಗಿರಿಜಮ್ಮ ಕಣ್ಣೀರಿಟ್ಟರು.

ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದಾಗಿ ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವೈದ್ಯರ ಮುಷ್ಕರಕ್ಕಿಂತ ಹಿಂದೆ ಸಾರ್ವಜನಿಕ ಆಸ್ಪತ್ರೆಗೆ ಸಾಧಾರಣ ಸಂಖ್ಯೆಯ ರೋಗಿಗಳು ಬರುತ್ತಿದ್ದರು. ಈಗ ದಿನಕ್ಕೆ 600 ರಿಂದ 700ರ ತನಕವೂ ಚಿಕಿತ್ಸೆಗೆ ಬರುತ್ತಿದ್ದಾರೆ. ಇಷ್ಟು ಸಂಖ್ಯೆಯ ರೋಗಳಿಗಳಿಗೆ ಆಸ್ಪತ್ರೆಯ ಸಿಬ್ಬಂದಿ ಎಲ್ಲರಿಗೂ ವ್ಯವಸ್ಥಿತವಾದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳಿದರು.

Facebook Comments

Sri Raghav

Admin