ಆರ್ಥಿಕ ಹೊರೆ ನಿಭಾಯಿಸಲು ಮದ್ಯ ಮಾರಾಟದ ಹೆಚ್ಚಳ, ಗಣಿ ಹರಾಜು

ಈ ಸುದ್ದಿಯನ್ನು ಶೇರ್ ಮಾಡಿ

Wine-Shops--01

ಬೆಳಗಾವಿ(ಸುವರ್ಣಸೌಧ), ನ.17- ಸಾಲಮನ್ನಾ ಯೋಜನೆಯಿಂದ ಉಂಟಾಗುವ ಆರ್ಥಿಕ ಹೊರೆ ಹಾಗೂ ಮುಂದಿನ ದಿನಗಳಲ್ಲಿ 6ನೇ ವೇತನ ಆಯೋಗ ಜಾರಿಯಿಂದ ಆಗಬಹುದಾದ ಹೊರೆಯನ್ನು ನಿಭಾಯಿಸಲು ಸಂಪನ್ಮೂಲ ಕ್ರೂಢೀಕರಣವನ್ನು ಹೆಚ್ಚಿಸಬೇಕಿದ್ದು, ಅದಕ್ಕಾಗಿ ಮದ್ಯ ಮಾರಾಟದ ಹೆಚ್ಚಳ ಹಾಗೂ ಗಣಿ ಹರಾಜಿನಂತಹ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಹಣಕಾಸಿನ ಮಧ್ಯವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.  ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸಮಗ್ರವಾಗಿ ವಿಶ್ಲೇಷಿಸಿರುವ ಮಧ್ಯವಾರ್ಷಿಕ ವರದಿ ಈ ವರ್ಷದ ಬಜೆಟ್ ಗಾತ್ರ ಕಳೆದ ಸಾಲಿಗಿಂತಲೂ ಶೇ.14.16ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಸರಿಸಮನವಾಗಿ ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಬೇಕಿದೆ.

ಬಜೆಟ್‍ನಲ್ಲಿ ತಿಳಿಸದೆ ಏಕಾಏಕಿ ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಎಂಎಂಎಲ್‍ನ ಹಣ ಬಳಕೆ ಸೇರಿದಂತೆ ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಬಂಡವಾಳ ಸ್ವೀಕೃತಿಗಳನ್ನು ಸುಧಾರಿಸಬೇಕು. ಹಣ ಸಂಗ್ರಹಣೆಗಾಗಿ ಅಬಕಾರಿ ಇಲಾಖೆ, ಸ್ವದೇಶಿ ಮದ್ಯ ಮಾರಾಟ ಪ್ರಮಾಣವನ್ನು ಹೆಚ್ಚಿಸಬೇಕು. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಮದ್ಯದ ಮಾರಾಟ ಕಡಿಮೆ ಇದೆ. ಬಾಕಿ ಉಳಿದಿರುವ ಗಣಿಗಳನ್ನು ಹರಾಜು ಹಾಕುವ ಮೂಲಕವೂ ಆದಾಯ ಮೂಲವನ್ನು ಹೆಚ್ಚಿಸಬೇಕು. ಕಳೆದ ವರ್ಷಕ್ಕಿಂತ ಮೋಟಾರು ವಾಹನ ನೋಂದಣಿಯಲ್ಲಿ ಇಳಿಮುಖವಾಗಿದೆ. ಜೀವಮಾನದ ತೆರಿಗೆ ಪದ್ಧತಿಯನ್ನು ಪರಿಷ್ಕರಣೆ ಮಾಡಬೇಕೆಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಆರನೇ ವೇತನ ಆಯೋಗ ಜನವರಿ ಅಂತ್ಯಕ್ಕೆ ವರದಿ ನೀಡುವ ಸಾಧ್ಯತೆ ಇದು, ಅದನ್ನು ಅನುಷ್ಠಾನಗೊಳಿಸಬೇಕಾದರೆ ಇನ್ನಷ್ಟು ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಳ್ಳಬೇಕಿದೆ. ಸಂಪನ್ಮೂಲಗಳನ್ನು ಅಧಿಕಗೊಳಿಸಿಕೊಳ್ಳಬೇಕು. ಬ್ಯಾಂಕ್ ಖಾತೆಗಳನ್ನು ಹಣವನ್ನು ನಿಷ್ಕ್ರಿಯವಾಗಿ ಇಡುವುದನ್ನು ತಪ್ಪಿಸಬೇಕೆಂದು ಶಿಫಾರಸು ಮಾಡಲಾಗಿದೆ.

ಕಳೆದ ಆರು ತಿಂಗಳಿನಿಂದೀಚೆಗೆ ತೆರಿಗೆ ಸಂಗ್ರಹದ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಆದರೆ, ಹೊಣೆಗಾರಿಕೆಗಳಿಗೆ ಅಂದಾಜು ಮಾಡಿದಾಗ ಇಂದು ತೆರಿಗೆ ಸಂಗ್ರಹ ಸುಧಾರಣೆಯಾಗಬೇಕು. ಜಿಎಸ್‍ಟಿ ಜಾರಿಯ ನಂತರ ಆಗಿರುವ ಕೊರತೆಯ ಬಗ್ಗೆ ಹೆಚ್ಚು ಅಧ್ಯಯನ ನಡೆಯಬೇಕು. ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ರಾಜ್ಯದ ಸಾಲದ ಪ್ರಮಾಣ 2016-17ರಲ್ಲಿ 208557ಕೋಟಿ ರೂ.ಗಳಷ್ಟಿದ್ದು, 2017-18ಕ್ಕೆ 2,42,420ಕೋಟಿ ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿ ಜಿಡಿಪಿ 11,17,334 ಕೋಟಿಗಳಿಂದ 13,10,879 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂಬ ಅಂದಾಜಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ರಾಜ್ಯದ ವಿತ್ತೀಯ ಕೊರತೆ ಆರ್ಥಿಕ ಹೊಣೆಗಾರಿಕೆ ಅಧಿನೀಯಮದ ಮಿತಿಯೊಳಗೆ ಇದ್ದು, ಬಹುಶಃ ಶೇ.2.54ರ ಅಂದಾಜಿನಲ್ಲಿ ನಿಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.

Facebook Comments

Sri Raghav

Admin