ವಿಷ ಮಿಶ್ರಿತ ಆಹಾರ ಸೇವಿಸಿ ಅಣ್ಣ-ತಂಗಿ ಸಾವು, ಅಪ್ಪ-ಅಮ್ಮ-ಅಕ್ಕ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

challa

ಚಳ್ಳಕೆರೆ, ನ.17- ವಿಷ ಮಿಶ್ರಿತ ಆಹಾರ ಸೇವಿಸಿ ಅಣ್ಣ-ತಂಗಿ ಮೃತಪಟ್ಟು ತಂದೆ-ತಾಯಿ ಮತ್ತು ಹಿರಿಯ ಮಗಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಪಾತಪ್ಪನಗುಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಪಾತಪ್ಪನಗುಡಿ ಬಜ್ಜಪ್ಪ (50), ಪತ್ನಿ ಲಕ್ಷ್ಮಿ (46) ಹಾಗೂ ಮಕ್ಕಳಾದ 16 ವರ್ಷದ ಅಂಜಲಿ, 6 ವರ್ಷದ ಜಗದೀಶ್ ಮತ್ತು 3 ವರ್ಷದ ವರ್ಷಿಣಿ ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ತಕ್ಷಣ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಜಗದೀಶ್ ಮತ್ತು ವರ್ಷಿಣಿ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಬಜ್ಜಪ್ಪ, ಲಕ್ಷ್ಮಿ ಮತ್ತು ಅಂಜಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ವಿವರ: ರಾತ್ರಿ ಸುಮಾರು 8 ಗಂಟೆ ವೇಳೆಗೆ ಈ ಕುಟುಂಬ ಚಿತ್ರಾನ್ನ, ಬೋಂಡ ಊಟ ಮಾಡಿ ಮಲಗಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಐವರಿಗೂ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿದೆ. ಅಕ್ಕಪಕ್ಕದ ಮನೆಯವರು ತಕ್ಷಣ ಆ್ಯಂಬುಲೆನ್ಸ್‍ಗೆ ಫೋನ್ ಮಾಡಿದ್ದಾರೆ. ಆ್ಯಂಬುಲೆನ್ಸ್ ಸ್ಥಳಕ್ಕೆ ಬರುವುದು ಸ್ವಲ್ಪ ತಡವಾಗಿದೆ. ನಂತರ ಅವರನ್ನೆಲ್ಲ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಪರಶುರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಹಾರದಲ್ಲಿ ಹಲ್ಲಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವೈದ್ಯಕೀಯ ವರದಿ ಬಂದ ನಂತರ ನಿಖರ ಕಾರಣ ತಿಳಿದುಬರಲಿದೆ. ಆಸ್ಪತ್ರೆ ಬಳಿ ಕುಟುಂಬದವರ ಸಂಬಂಧಿಕರು, ಗ್ರಾಮಸ್ಥರು ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಎರಡು ಪುಟ್ಟ ಮಕ್ಕಳು ಹೀಗೆ ಸಾವನ್ನಪ್ಪಿರುವುದು ಜನರನ್ನು ದುಃಖಕ್ಕೀಡುಮಾಡಿದೆ. ಪಾತಪ್ಪನಗುಡಿ ಸಮೀಪದ ಓಬಳಾಪುರ ಗ್ರಾಮದಲ್ಲಿ 36 ಹಾಸಿಗೆಯ ಸರ್ಕಾರಿ ಆಸ್ಪತ್ರೆಯೊಂದಿದ್ದು, ವೈದ್ಯರಾಗಲಿ, ಸೌಲಭ್ಯಗಳಾಗಲಿ ಯಾವುದೂ ಇಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ಈ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲಿ. ನಮಗೆ ಬಂದಂತಹ ಈ ದುಸ್ಥಿತಿ ಇತರರಿಗೂ ಬರುವುದು ಬೇಡ ಎಂದು ಮಕ್ಕಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಜ್ಜಪ್ಪ ಮತ್ತು ಲಕ್ಷ್ಮಿ ಹೇಳಿದ್ದಾರೆ.

Facebook Comments

Sri Raghav

Admin