ನಾಳೆಯಿಂದ ಜಗತ್ಪ್ರಳಯ ಆರಂಭ…?!

ಈ ಸುದ್ದಿಯನ್ನು ಶೇರ್ ಮಾಡಿ

Planet--X-01
ವಾಷಿಂಗ್ಟನ್,ನ.18- ಪ್ಲಾನೆಟ್ ಎಕ್ಸ್ ಎಂಬ ಕ್ಷುದ್ರಗ್ರಹ ಇಳೆಗೆ ಅಪ್ಪಳಿಸಲಿದ್ದು, ಪೃಥ್ವಿ ಚೂರು ಚೂರಾಗಿ ಸಕಲ ಜೀವ ಸಂಕುಲಗಳು ನಶಿಸಲಿವೆ ಎಂದು ಕೆಲವು ವಿಜ್ಞಾನಿಗಳು ತಿಳಿಸಿದ ದಿನಾಂಕ ನ.19 ಸಮೀಪಿಸಿದ್ದು, ಇದು ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಪ್ಲಾನೆಟ್ ಎಕ್ಸ್ ಎಂಬ ನಿಬಿರು ಗ್ರಹ( ಅಸ್ಟಿರಾಯ್ಡ್) 3,600 ವರ್ಷಗಳಿಗೊಮ್ಮೆ ಮಾತ್ರ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದು, ಅದರಿಂದ ಹೊರಹೊಮ್ಮುವ ಪ್ಲಾಸ್ಮಟಿಕ್ ಇಂಧನವೊಂದು ಜಗತ್ತಿನ ಸರ್ವನಾಶಕ್ಕೆ ಕಾರಣವಾಗಲಿದೆ ಎಂದು ಅಮೆರಿಕದ ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞ (ನ್ಯೂಮರಾಲಜಿಸ್ಟ್) ಡೇವಿಡ್ ಮೀಡೇ ಹೇಳಿರುವುದು ಆತಂಕಕ್ಕೀಡು ಮಾಡಿದೆ.

ಅಲ್ಲದೆ ನಾಳೆಯೇ ಈ ಕ್ಷುದ್ರ ಗ್ರಹ ಯಾವುದೇ ಕ್ಷಣದಲ್ಲಿ ಧರೆಯ ಒಡಲಿಗೆ ಬಡಿದು ಭಾರೀ ಅಲ್ಲೋಲಕಲ್ಲೋಲ ಉಂಟು ಮಾಡಲಿದೆ ಎಂದು ಹೇಳಿದ್ದಾರೆ. ಇದರಿಂದ ಭೂಮಿಯೇ ಹೊತ್ತಿ ಉರಿಯಬಹುದು ಅಥವಾ ಇಳೆಯನ್ನೇ ಕಬಳಿಸುವ ಜಲಪ್ರಳಯವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮೀಡೇ ಭವಿಷ್ಯವಾಣಿಯ ಬಗ್ಗೆ ಜಗತ್ತಿನಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಹಿಂದೆಯೂ ಕೂಡ ಮಹಾನಗರದ ಗಾತ್ರದ ಕ್ಷುದ್ರ ಗ್ರಹಗಳು ಭೂಮಿಗೆ ಅಪ್ಪಳಿಸಲಿವೆ ಎಂದು ದಿನಾಂಕವನ್ನು ಸಹ ಹೇಳಲಾಗಿತ್ತು. ಆದರೆ ಅಂಥ ಆತಂಕಕಾರಿ ವಿದ್ಯಮಾನಗಳು ಸಂಭವಿಸಿಲ್ಲ. ಹೀಗಾಗಿ ಮೀಡೇ ಹೇಳಿಕೆ ಸುಳ್ಳಾಗಬಹುದು ಎಂದು ವಿಜ್ಞಾನಿಗಳು ವಾದಿಸಿದ್ದಾರೆ. ಆದಾಗ್ಯೂ ನಾಳಿನ ಸಂಭವನೀಯ ಕ್ಷುದ್ರ ಗ್ರಹ ಕಂಟಕದ ಬಗ್ಗೆ ಜಗತ್ತಿನಾದ್ಯಂತ ಕುತೂಹಲವಂತೂ ಇದ್ದೇ ಇದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಮೀಡೇಯ ಭವಿಷ್ಯವಾಣಿಯನ್ನು ತಳ್ಳಿ ಹಾಕಿದೆ. ನಿಬಿರು ಗ್ರಹ ಭೂಮಿಯ ಕಡೆಗೆ ಬರುತ್ತಿರುವುದು ನಿಜವೇ ಆಗಿದ್ದರೆ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿರುವ ವಿಜ್ಞಾನಿಗಳ ಕಣ್ಣಿಗೆ ಅದು ಗೋಚರಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದೆ.
ಮೇಲಾಗಿ ಸೌರವ್ಯೂಹದ ಪ್ರತಿಯೊಂದು ವಿದ್ಯಮಾನಗಳ ಬಗ್ಗೆಯೂ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಅನುಕ್ಷಣವೂ ತೀವ್ರ ನಿಗಾವಹಿಸಿದ್ದು, ಅಂಥ ಯಾವುದೇ ಕ್ಷುದ್ರ ಗ್ರಹಗಳಾಗಲಿ, ಬೃಹದಾಕಾರದ ಆಕಾಶ ಕಾಯಗಳಾಗಲಿ ಸದ್ಯಕ್ಕೆ ಭೂಮಿಯ ಸನಿಹಕ್ಕೆ ಬಂದಿರುವ ಸಾಧ್ಯತೆಗಳೇ ಇಲ್ಲ ಎಂದು ನಾಸಾ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಇನ್ನೊಂದೆಡೆ ಡೇವಿಡ್ ಮೀಡೇ ಅವರ ವಾದವನ್ನು ಒಪ್ಪಿರುವ ಕೆಲವು ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳು ಇಂತಹ ಕ್ಷುದ್ರ ಗ್ರಹಗಳು ಯಾವುದೇ ಸಂದರ್ಭದಲ್ಲಿ ಊಹಾತೀತ ವೇಗದಲ್ಲಿ ಭೂಮಿಯ ಕಡೆಗೆ ಧಾವಿಸಿ ಅಪ್ಪಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅತ್ಯಾಧುನಿಕ ವಿಜ್ಞಾನವನ್ನೂ ಮೀರಿದ ವಿಸ್ಮಯಗಳು ಮತ್ತು ಅತ್ಯಂತ ಅಪಾಯಕಾರಿ ಆಕಾಶಕಾಯಗಳು ಸೌರಮಂಡಲ ದಲ್ಲಿ ಇವೆ. ಹೀಗಾಗಿ ನಾಳೆಯೇ ಕ್ಷುದ್ರ ಗ್ರಹಗಳು ಅಪ್ಪಳಿಸದಿದ್ದರೂ ಮುಂದೊಂದು ದಿನ ಯಾವುದೇ ಸಂದರ್ಭದಲ್ಲಿ ವಸುಂಧರೆಯ ಒಡಲನ್ನು ಬಗೆಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.  ಕಾಕತಾಳೀಯ ಎಂಬಂತೆ ವಿಶ್ವದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ವಿನಾಶಕಾರಿ ಭೂಕಂಪಗಳು, ಪ್ರವಾಹಗಳು ಸೇರಿದಂತೆ ಇತರ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ.  ಒಟ್ಟಾರೆ ನಾಳೆ ಪೃಥ್ವಿಯನ್ನು ಚೂರು ಚೂರು ಮಾಡಬಹುದಾದ `ಕ್ಷುದ್ರ ಗ್ರಹ’ದ ದಾಳಿ ಬಗ್ಗೆ ವಿಶ್ವದಲ್ಲಿ ಭಯ ಮಿಶ್ರಿತ ಕುತೂಹಲವಂತೂ ಇದ್ದೇ ಇದೆ.

Facebook Comments

Sri Raghav

Admin