ಸಿಎಂ, ಶಿಕ್ಷಣ ಸಚಿವರಿಗೆ ಕಾಣದಾಗಿದೆ ತವರು ಜಿಲ್ಲೆಯ ಕನ್ನಡ ಶಾಲೆಯ ದುಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

my

ಮೈಸೂರು, ನ.18- ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಕನ್ನಡ ಶಾಲೆಯೊಂದು ಶಿಥಿಲಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದ ಶತಮಾನದ ಕಟ್ಟಡ ಇಂದು ದುಸ್ಥಿತಿಗೆ ತಲುಪಿದೆ. ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿದೆ. ಹೀಗಿದ್ದರೂ ಸಹ ಇದೇ ಕಟ್ಟಡದಲ್ಲಿ ಆತಂಕದಲ್ಲೇ ವಿದ್ಯಾರ್ಥಿಗಳು ಪಾಠ, ಪ್ರವಚನವನ್ನು ಕೇಳುವಂತಾಗಿದೆ.

ನಂಜನಗೂಡಿನ ಬಿಇಒ ಕಚೇರಿ ಸಮೀಪದಲ್ಲಿರುವ ಸರ್ಕಾರಿ ಶಾಲೆಯೇ ಇಂತಹ ದುಸ್ಥಿತಿಗೆ ತಲುಪಿದ್ದು, ಶಾಲೆಯ ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. 1946ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹಾತ್ಮಗಾಂಧೀಜಿ ಅವರು ಈ ಶಾಲೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ಜಿಲ್ಲೆಯ ಡಿಡಿಪಿಐ ಇದೇ ಶಾಲೆಯಲ್ಲಿ ಓದಿದ್ದರು. ಆದರೆ ಶತಮಾನದ ಕನ್ನಡ ಶಾಲೆ ಇಂದು ಕುಸಿಯುವ ಹಂತ ತಲುಪಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ, ಸಚಿವ ತನ್ವೀರ್‍ಸೇಠ್ ಅವರಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಶಾಲೆಯ ಬಗ್ಗೆ ಕಾಳಜಿ ವಹಿಸಿಲ್ಲ. ಇನ್ನಾದರೂ ಶಾಲೆ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಪ್ರಾಣ ರಕ್ಷಿಸುವರೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

Facebook Comments