ಜನವರಿಯಿಂದ 50 ಹೊಸ ತಾಲ್ಲೂಕುಗಳ ಕಾರ್ಯಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Kagodu-Timmappa-Session

ಬೆಳಗಾವಿ(ಸುವರ್ಣಸೌಧ), ನ.20- ರಾಜ್ಯದಲ್ಲಿ 50 ಹೊಸ ತಾಲ್ಲೂಕುಗಳು ಜನವರಿ ತಿಂಗಳಿನಿಂದ ಕಾರ್ಯಾರಂಭ ಮಾಡಲಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾ ನಸಭೆಗೆ ತಿಳಿಸಿದ್ದಾರೆ. ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 50 ಹೊಸ ತಾಲ್ಲೂಕುಗಳ ರಚನೆಗೆ ಕಳೆದ ಸೆ.6 ಮತ್ತು ಅ.16ರಂದು ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮುಂದಿನ ವರ್ಷದ ಜನವರಿಯಲ್ಲಿ ಹೊಸ ತಾಲ್ಲೂಕುಗಳು ಅಸ್ವಿತ್ವಕ್ಕೆ ಬರಲಿವೆ ಎಂದು ಹೇಳಿದರು.

ಪರಿಣಾಮಕಾರಿ ಹಾಗೂ ಸಮರ್ಥ ಆಡಳಿತ ನೀಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆ ಒದಗಿಸಲು 1973ರ ವಾಸುದೇವ ಆಯೋಗ, 1994ರ ಟಿ.ಎಂ.ಹುಂಡೆಕರ್ ಸಮಿತಿ, 1996ರ ಪಿ.ಸಿ.ಗದ್ದಿಗೌಡರ್, 2007ರ ಎಂ.ಬಿ.ಪ್ರಕಾಶ್ ಸಮಿತಿಗಳ ವರದಿಗಳನ್ನು ಆಧರಿಸಿ ಭೌಗೋಳಿಕ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಹೊಸ ತಾಲ್ಲೂಕು ರಚಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಿಂದ ಹೊಸ ತಾಲ್ಲೂಕುಗಳಿಗೆ ವ್ಯಾಪಕ ಬೇಡಿಕೆಗಳು ಕೇಳಿ ಬಂದವು.

ಅಪ್ಪಚ್ಚುರಂಜನ್ ಅವರು ಸೋಮವಾರಪೇಟೆ ತಾಲ್ಲೂಕು ದೊಡ್ಡದಾಗಿದ್ದು, ಅದನ್ನು ವಿಭಜಿಸಿ ಇನ್ನೋಂದು ತಾಲ್ಲೂಕು ಘೋಷಣೆ ಮಾಡಬೇಕು ಮತ್ತು ಹೆಚ್ಚುವರಿ ತಹಸೀಲ್ದಾರ್ ಅವರನ್ನು ನೇಮಿಸಬೇಕು ಎಂದರು. ಹೆಚ್ಚುವರಿ ತಹಸೀಲ್ದಾರ್ ನೇಮಕಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ಕಳಸಾ ಹೋಬಳಿ ಮೂಡುಗೆರೆ ತಾಲ್ಲೂಕಿನ 155 ಕಿ.ಮೀ. ದೂರದಲ್ಲಿದೆ. ಅದನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಘೋಷಿಸಲು ಪಕ್ಷಾತೀತವಾಗಿ ಎಲ್ಲಾ ಶಾಸಕರು ಒತ್ತಾಯಿಸುತ್ತಿದ್ದೇವೆ ಎಂದು ಸಿ.ಟಿ.ರವಿ, ವೈ.ಎಸ್.ವಿದತ್ತ, ಜೀವರಾಜ್ ಹೇಳಿದರು. ಜಮಖಂಡಿ ಕ್ಷೇತ್ರದ ಸವಳಿ ಹೋಬಳಿಯನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಬೇಕು. ಬೆಳಗಾವಿಯ ಹಾಲೋಗೇರಿ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಬೇಕೆಂದು ಬೇಡಿಕೆಗಳು ಕೇಳಿ ಬಂದವು.

Facebook Comments

Sri Raghav

Admin