ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವೇಗೌಡರ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

Devegowda-Siddaramaiaha

ಬೆಂಗಳೂರು, ನ.20- ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆ ಸಂಬಂಧ ಯೋಜನೆ ರದ್ದುಗೊಳಿಸುವ ಸಂಬಂಧ ಸದನಸಮಿತಿ ವರದಿ ನೀಡಿ ಒಂದು ವರ್ಷವಾದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ನೈಸ್ ಒಪ್ಪಂದ ರದ್ದು ಮಾಡಬೇಕೆಂದು ಸದನಸಮಿತಿ ವರದಿ ನೀಡಿ ಒಂದು ವರ್ಷವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದಕೆ ಕಾರಣವೇನು ? ತಮ್ಮ ಮೇಲೆ ಯಾವ ಪ್ರಭಾವ ಒತ್ತಡ ಬೀರುತ್ತಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೈಸ್ ಸಂಸ್ಥೆಯ ಅದ್ವಾನ, ಅವ್ಯವಹಾರಗಳ ಬಗ್ಗೆ ಸವಿಸ್ತಾರವಾಗಿ ಪತ್ರದಲ್ಲಿ ಉಲ್ಲೇಖಿಸಿರುವ ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸಂದರ್ಭದಲ್ಲಿದ್ದಾಗಿನಿಂದ ನಡೆಸಿದ ನೈಸ್ ವಿರದ್ಧ ನಡೆಸಿದ ಹೋರಾಟ ನೈಸ್‍ನ ಅವ್ಯವಹಾರ, ಭೂ ಕಬಳಿಕೆ, ಭೂ ಸ್ವಾಧೀನ, ರೈತರಿಗೆ ಆಗಿರುವ ತೊಂದರೆ, ನೈಸ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಮುಂತಾದ ವಿಚಾರಗಳನ್ನು ಪತ್ರದಲ್ಲಿ ದೇವೇಗೌಡರು ದಾಖಲಿಸಿದ್ದಾರೆ.

ಕಳೆದ ವರ್ಷವೇ ನೈಸ್ ವರದಿ ಮಂಡಿಸಲಾಯಿತು. ಸುದೀರ್ಘ ಚರ್ಚೆ ನಡೆದು ಸಿಬಿಐ ತನಿಖೆ ನಡೆಸುವಂತೆ ಎಲ್ಲಾ ಪಕ್ಷಗಳು ಒಕ್ಕೊರಲಿನಿಂದ ಒತ್ತಾಯಿಸಿದ್ದವು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ನೈಸ್ ಸಂಸ್ಥೆ ಬಹಳಷ್ಟು ಷರತ್ತುಗಳನ್ನು ಉಲ್ಲಂಘಿಸಿದೆ. ಈ ಯೋಜನೆಯನ್ನು ರದ್ದು ಪಡಿಸಬೇಕಾಗಿರುವುದು ಆದ್ಯತೆಯಾಗಿದೆ. ವಿಳಂಬ ಮಾಡದಂತೆ ರದ್ದು ಮಾಡಿ ರೈತರು ಹಾಗೂ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಗೌಡರು ಆಗ್ರಹಿಸಿದ್ದಾರೆ.

Facebook Comments

Sri Raghav

Admin