ಹೊಸ ಉದ್ದಿಮೆದಾರರಿಗೆ ಕೆಎಸ್‍ಎಫ್‍ಸಿಯಿಂದ 5ಕೋಟಿ ಸಾಲಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

KSFC-0102

ಬೆಂಗಳೂರು, ನ.20-ಮೊದಲ ಪೀಳಿಗೆ ಉದ್ದಿಮೆದಾರರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ನೀಡಲಾಗುವ ಬಡ್ಡಿ ಸಹಾಯಧನ ಯೋಜನೆ ಮೊತ್ತವನ್ನು ಒಂದು ಲಕ್ಷದಿಂದ 5 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಪರಿಷ್ಕøತ ಯೋಜನೆ ನಾಳೆಯಿಂದ ಜಾರಿಗೆ ಬರಲಿದ್ದು, ಯುವ ಉದ್ದಿಮೆದಾರರು ಇದರ ಸದುಪಯೋಗಪಡೆದುಕೊಳ್ಳುವಂತೆ ಕೆಎಸ್‍ಎಫ್‍ಸಿ ಸಂಸ್ಥೆ ಮನವಿ ಮಾಡಿದೆ.

ರಾಜ್ಯದ ಅತಿ ಸಣ್ಣ , ಸಣ್ಣ ಮತ್ತು ಮಧ್ಯಮಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ 1959ರಲ್ಲಿ ಸ್ಥಾಪನೆಯಾದ ಕೆಎಸ್‍ಎಫ್‍ಸಿ ಸಂಸ್ಥೆ ಇದುವರೆಗೂ 1.72 ಲಕ್ಷಕ್ಕೂ ಹೆಚ್ಚು ಉದ್ದಿಮೆದಾರರಿಗೆ 15,276.05ಕೋಟಿ ರೂ.ಗಳ ಸಾಲಸೌಲಭ್ಯ ಒದಗಿಸಿದೆ.ಭಾರತದ ಸ್ಟಾರ್ಟ್ ಅಪ್ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನಲ್ಲಿ ಹಲವಾರು ಯುವ ಉದ್ದಿಮೆಗಳು ಹೊಸ ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದು, ಇದುವರೆಗೂ ಶೇ.60 ರಿಂದ 70ರಷ್ಟು ಮಂದಿಗೆ ಸಂಸ್ಥೆಯಿಂದ ಸಾಲಸೌಲಭ್ಯ ಒದಗಿಸಲಾಗಿದೆ.

ಮೊದಲ ಪೀಳಿಗೆ ಉದ್ದಿಮೆದಾರರಿಗೆ ವಾರ್ಷಿಕ ಶೇ.8ರ ನಿವ್ವಳ ಬಡ್ಡಿ ದರದಲ್ಲಿ ಬಡ್ಡಿ ಸಹಾಯ ಧನ ಯೋಜನೆಯಲ್ಲಿ ಒಂದು ಲಕ್ಷ ರೂ.ಗಳವರೆಗೆ ಸಾಲಸೌಲಭ್ಯ ನೀಡುವ ಸವಲತ್ತನ್ನು 2015ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಗೆ ಉದ್ದಿಮೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಲಸೌಲಭ್ಯದ ಮೊತ್ತವನ್ನು 5 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ಯೋಜನೆಯಡಿ ಸಾಲಸೌಲಭ್ಯ ಪಡೆಯುವ ವ್ಯಕ್ತಿಗಳು ಮೊದಲ ಬಾರಿಗೆ ಉದ್ದಿಮೆ ಸ್ಥಾಪಿಸುವಂತಹವರಾಗಿರಬೇಕು. ಯಾವುದೇ ಹಾಲಿ ಉದ್ದಿಮೆಗಳಲ್ಲಿ ಪಾಲುದಾರಿಕೆ ಹೊಂದಿರಬಾರದು, ಈ ಯೋಜನೆಯಡಿ ವಾರ್ಷಿಕ ಶೇ.8ರಷ್ಟು ಬಡ್ಡಿ ದರದಲ್ಲಿ ಸಾಲಸೌಲಭ್ಯ ಪಡೆದವರಿಗೆ ಸರ್ಕಾರ ಗರಿಷ್ಠ ಶೇ.6ರಷ್ಟು ಸಹಾಯಧನ ನೀಡಲಿದೆ. ಸಾಲಸೌಲಭ್ಯ ಪಡೆಯಲಿಚ್ಛಿಸುವ ಹೊಸ ಉದ್ದಿಮೆದಾರರು ಜಿಲ್ಲಾ ಕೇಂದ್ರಗಳಲ್ಲಿರುವ ಸಂಸ್ಥೆಯ ಶಾಖಾ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

Facebook Comments

Sri Raghav

Admin