ಜನಪ್ರತಿನಿಧಿ ಮತ್ತು ಅಧಿಕಾರಿ ಮಕ್ಕಳ ಕಡ್ಡಾಯ ಸರ್ಕಾರಿ ಶಾಲಾ ಶಿಕ್ಷಣಕ್ಕೆ ಸಿದ್ದಗೊಂಡ ಮಸೂದೆ

ಈ ಸುದ್ದಿಯನ್ನು ಶೇರ್ ಮಾಡಿ

govt

ಬೆಳಗಾವಿ(ಸುವರ್ಣಸೌಧ), ನ.21- ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಖಾಸಗಿ ಮಸೂದೆ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ. ನಾಳೆ ಅಥವಾ ಗುರುವಾರ ವಿಧಾನಪರಿಷತ್‍ನಲ್ಲಿ ಈ ಮಸೂದೆ ಮಂಡನೆಯಾಗಿ ಚರ್ಚೆಗೆ ಬರಲಿದೆ. ಒಂದು ವೇಳೆ ಎರಡು ಉಭಯ ಸದನಗಳಲ್ಲಿ ಅಂಗೀಕಾರವಾದರೆ, ಇನ್ನು ಮುಂದೆ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವುದು ಅನಿವಾರ್ಯ.

ಉತ್ತರ ಪ್ರದೇಶದ ನಂತರ ಸರ್ಕಾರಿ ಶಾಲೆಗಳಿಗೂ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಜಿಪಂ, ತಾಪಂ, ಪಪಂ, ನಗರಸಭೆ, ಐಎಎಸ್, ಐಎಫ್‍ಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲೇ ಪ್ರವೇಶಾತಿಯನ್ನು ಪಡೆಯಬೇಕಾಗುತ್ತದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಈ ನಿಯಮ ಜಾರಿಯಲ್ಲಿರುವುದರಿಂದ ರಾಜ್ಯ ಸರ್ಕಾರವೂ ಈ ಮಸೂದೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ರಘುಆಚಾರ್ ಈ ವಿಧೇಯಕವನ್ನು ವಿಧಾನಪರಿಷತ್‍ನಲ್ಲಿ ಮಂಡಿಸುವ ಸಂಬಂಧ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಒಪ್ಪಿಗೆಯನ್ನು ಪಡೆದಿದ್ದಾರೆ.ನಾಳೆ ಅಥವಾ ಗುರುವಾರ ವಿಧಾನಪರಿಷತ್‍ನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಬಳಿಕ ವಿಧಾನಸಭೆಯಲ್ಲೂ ಚರ್ಚೆಗೆ ಒಳಪಟ್ಟು ನಂತರ ಶಾಸನವಾಗಲಿದೆ.

ಕಾರಣವೇನು?: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಕೂಡ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕೆಂಬ ಕೂಗು ಬಹುದಿನಗಳಿಂದ ಕೇಳಿ ಬರುತ್ತಿತ್ತು. ಕೆಲವು ಕಡೆ ಮೂಲ ಭೂತ ಸೌಕರ್ಯಗಳು ಇಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದವು. ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಜಾರಿ ಮಾಡಿತ್ತು. ಮಧ್ಯಾಹ್ನ ಬಿಸಿಯೂಟ, ಸೈಕಲ್ ವಿತರಣೆ, ಕ್ಷೀರಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಸೇರಿದಂತೆ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದರೂ ನಿರೀಕ್ಷಿತ ಫಲಿತಾಂಶ ಮಾತ್ರ ಬಂದಿರಲಿಲ್ಲ. ಒಂದು ಕಡೆ ಸರ್ಕಾರದ ಕಾರ್ಯಕ್ರಮ ವಿಫಲವಾಗುತ್ತಿರುವುದು, ಮತ್ತೊಂದೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬರುತ್ತಿರುವುದು ಸರ್ಕಾರವನ್ನೇ ಅಣಕಿಸುವಂತೆ ಮಾಡಿತ್ತು.

ಇತ್ತ ಖಾಸಗಿ ಶಾಲೆಗಳು ಕೂಡ ಸರ್ಕಾರಕ್ಕೆ ಸಡ್ಡು ಹೊಡಯುವ ರೀತಿಯಲ್ಲಿ ಮಕ್ಕಳನ್ನು ಆಕರ್ಷಿಸುತ್ತಿವೆ. ಎಷ್ಟೇ ಯೋಜನೆಗಳನ್ನು ಜಾರಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಮನಗೊಂಡಿರುವ ಸರ್ಕಾರ ಈ ಮಸೂದೆಯನ್ನು ಜಾರಿ ಮಾಡಲು ತೀರ್ಮಾನಿಸಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ಕುಮ್ಮಕ್ಕಿನಿಂದಲೇ ಸರ್ಕಾರಿ ಶಾಲೆಗಳು ಅವಸಾನದ ಅಂಚಿಗೆ ತಲುಪುತ್ತಿವೆ ಎಂಬುದನ್ನು ಮನಗಂಡಿರುವ ಸರ್ಕಾರ ಮಸೂದೆ ಮೂಲಕ ಈ ಒಳಸಂಚಿಗೆ ಕಡಿವಾಣ ಹಾಕಲು ಮುಂದಾಗಿದೆ. ಉಭಯ ಸದನಗಳಲ್ಲಿ ಬಹುಮತದಿಂದ ಈ ಮಸೂದೆ ಅಂಗೀಕಾರವಾದ ನಂತರ ಒಪ್ಪಿಗೆ ಪಡೆಯಲು ರಾಜ್ಯಪಾಲರ ಅನುಮತಿಗೆ ಕಳುಹಿಸಿಕೊಡುತ್ತಾರೆ. ತದನಂತರ ಅದು ಕಾಯ್ದೆ ರೂಪದಲ್ಲಿ ಜಾರಿಯಾಗುತ್ತದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗುವ ಸಂಭವವಿದೆ.

Facebook Comments

Sri Raghav

Admin