ಪಾನ ನಿಷೇಧ ಜವಾಬ್ದಾರಿಯನ್ನು ಕೇಂದ್ರದ ಹೆಗಲಿಗೆ ಹೊರಿಸಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

cm

ಬೆಳಗಾವಿ(ಸುವರ್ಣಸೌಧ), ನ.21-ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಸಾಧ್ಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಏಕರೂಪ ನೀತಿ ಜಾರಿಗೊಳಿಸಿದರೆ ನಮ್ಮ ಸರ್ಕಾರ ಬೆಂಬಲಿಸಲಿದೆ ಎಂದರು. ವಿಧಾನಸಭೆಯಲ್ಲಿಂದು ಮದ್ಯಪಾನ ನಿಷೇಧ ಗಂಭೀರ ಚರ್ಚೆಗೆ ಗ್ರಾಸವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದ್ದು, ಗದ್ದಲ ತೀವ್ರವಾದಾಗ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.

ಸಾರಾಯಿ ನಿಷೇಧ ಮಾಡಿದ್ದು ನಮ್ಮ ಸರ್ಕಾರ ಎಂದು ಬಿಜೆಪಿ ಹೇಳಿಕೊಳ್ಳುವಾಗ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿ ಸಾರಾಯಿ ನಿಷೇಧ ಮಾಡಿದ್ದು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಮಾತ್ರ. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಿದರು ಎಂದು ನೀಡಿದ ಹೇಳಿಕೆ ಕೋಲಾಹಕ್ಕೆ ಕಾರಣವಾಯಿತು.
ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಕಡತದಿಂದ ತೆಗೆಯಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ಅಳೆದು ತೂಗಿ ಅಂತಿಮವಾಗಿ ಸಭಾಧ್ಯಕ್ಷರ ಮುಂದಿನ ಭಾವಿಗಿಳಿದು ಧರಣಿ ನಡೆಸಿದ್ದರಿಂದ ಕಲಾಪ ಮುಂದೂಡಬೇಕಾಯಿತು. ಪ್ರಶ್ನೋತ್ತರ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸುವ ಚಿಂತನೆ ಇದೆಯೇ ? ಹಾಗಿದ್ದರೆ ಯಾವಾಗ ನಿಷೇಧಿಸಲಾಗುವುದು? ಮದ್ಯ ಸೇವನೆಯಿಂದ ಬಡ ಕುಟುಂಬಗಳು ಬೀದಿಪಾಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಬೀದಿಪಾಲಾಗುವ ಕುಟುಂಬಗಳಿಗೆ ಸರ್ಕಾರ ಪರಿಹಾರ ಕೊಡಲಿದೆಯೇ ಎಂದು ಕೇಳಿದರು.
ಈ ನಾಲ್ಕೂ ಪ್ರಶ್ನೆಗಳಿಗೂ ಸರ್ಕಾರದ ಪರವಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಲಾಪುರ್ ಇಲ್ಲ ಎಂದು ಉತ್ತರಿಸಿದರು.

ಆರಂಭದಲ್ಲಿ ಚರ್ಚೆ ಲಘುವಾದ ದಾಟಿಯ್ಲಲೇ ಆರಂಭವಾಯಿತು. ಸಿ.ಟಿ.ರವಿ ಅವರು ಸರ್ಕಾರ ಜಾಣ ಕಿವುಡು, ಜಾಣ ಕುರುಡು ನೀತಿ ಅನುಸರಿಸುತ್ತಿದೆ. ಲಕ್ಷಾಂತರ ಕುಟುಂಬಗಳ ಬದುಕು ಬೀದಿಪಾಲಾಗಿದೆ. ಮದ್ಯಪಾನ ಸಂಯಮ ಮಂಡಳಿ ಸ್ಥಾಪಿಸಿ ಆ ಮೂಲಕ ಕುಡಿದರೆ ಮನೆ ಹಾಳು ಎಂಬ ಗೋಡೆ ಬರಹ ಬರೆಸಲಾಗಿದೆ. ಇನ್ನು ಮುಂದೆ ಕುಡಿದವರು ಸಂತೋಷದಿಂದ ಇರುತ್ತಾರೆ ಎಂದು ಬರೆಸಿ ಎಂದು ಲೇವಡಿ ಮಾಡಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಶಾಸಕರು ರವಿ ಅವರ ಮಾತಿಗೆ ಅಡ್ಡಿ ಪಡಿಸಿದರು. ನಮ್ಮ ಸರ್ಕಾರ ಸಾರಾಯಿ ನಿಷೇಧ ಮಾಡಿತ್ತು. ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಪಾನ ನಿಷೇಧ ಇದೆ. ಕರ್ನಾಟಕದಲ್ಲೂ ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಸಚಿವ ತಿಮ್ಮಾಪುರ್, ಸಂಪೂರ್ಣ ಪಾನ ನಿಷೇಧದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಅಬಕಾರಿ ಇಲಾಖೆಯಿಂದ 18,050ಕೋಟಿ ಆದಾಯದ ನಿರೀಕ್ಷೆ ಇದೆ. ಈವರೆಗೂ 11ಸಾವಿರ ಕೋಟಿ ವಸೂಲಿಯಾಗಿದೆ. ಮದ್ಯಪಾನ ಸೇವನೆಯಿಂದ ಬೀದಿಗೆ ಬಿದ್ದ ಕುಟುಂಬಗಳ ಮಾಹಿತಿಯನ್ನು ಸಚಿವ ರಮೇಶ್‍ಕುಮಾರ್ ಅವರಿಂದ ಪಡೆದು ಒದಗಿಸುತ್ತೇನೆ ಎಂದು ಲಘು ದಾಟಿಯಲ್ಲಿ ಉತ್ತರಿಸಿದರು. ಬಿಜೆಪಿ ಶಾಸಕ ಸುರೇಶ್‍ಕುಮಾರ್ ಅವರು, ಕುಡಿದು ಬೀದಿ ಪಾಲಾದ ಕುಟುಂಬಗಳ ಉಸ್ತುವಾರಿ ಆರೋಗ್ಯ ಇಲಾಖೆಗೆ ಯಾವಾಗ ವರ್ಗಾವಣೆ ಆಯಿತು ಎಂದು ಪ್ರಶ್ನಿಸಿದರು.

ಆಗಷ್ಟೇ ಒಳಗೆ ಬಂದಿದ್ದ ಸಚಿವ ರಮೇಶ್‍ಕುಮಾರ್ ಅವರು, ನಾವು ಬೀದಿ ಪಾಲಾಗಿರುವವರ ಬಗ್ಗೆ ಮಾತನಾಡುತ್ತೇವೆ. ನೀವು ಭದ್ರವಾಗಿರುವವರ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಮಾರ್ಮಿಕವಾಗಿ ಹೇಳಿದರು. ಈ ಮಧ್ಯೆ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಮದ್ಯಪಾನ ನಿಷೇಧದ ಬಗ್ಗೆ ಈಗ ಜ್ಞಾನೋದಯವಾಗಿದೆ. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಬಕಾರಿ ಸಚಿವರಾಗಿದ್ದ ಯಶೋಧರದಾಸಪ್ಪ ಅವರ ಕಾಲದಿಂದಲೂ ಸಂಪೂರ್ಣ ಪಾನ ನಿಷೇಧ ಕುರಿತು ಚರ್ಚೆ ನಡೆಯುತ್ತಿದೆ. ಅದು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಾಗ ಯಶೋಧರದಾಸಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೇಳಿದರು. ಸಮ್ಮಿಶ್ರ ಸರ್ಕಾರದಲ್ಲಿ ಸರಾಯಿ ನಿಷೇಧ ಮಾಡಿದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ. ಟೀ, ಬೀಡಿ ಅಂಗಡಿಗಳಲ್ಲಿ ಬಾಟೆಲ್‍ಗಳು ಮಾರಾಟವಾದವು. ಈ ಮೊದಲು 12ರೂ.ಗೆ ಒಂದು ಪ್ಯಾಕೆಟ್ ಸಾರಾಯಿಯಂತೆ ಎರಡು ಪ್ಯಾಕೆಟ್ ಸಾರಾಯಿ ಕಡಿದರೆ ಸಾಕಿತ್ತು. ಅದಕ್ಕೆ 24ರೂ. ಖರ್ಚಾಗುತ್ತಿತ್ತು. ಒಂದು ಚಾಕ್ಣ ತಿಂದಿದ್ದರೆ 30ರೂ.ನಲ್ಲಿ ಬಡವನ ಚಟ ತೀರುತ್ತಿತ್ತು. ಈಗ ಒಂದು ಕ್ವಾಟರ್‍ಗೆ 70ರೂ. ಇದೆ. ನಿಷೆ ಏರಬೇಕಾದರೆ ಎರಡು ಕ್ವಾಟರ್ ಕುಡಿಯಬೇಕು. 150ರೂ. ಖರ್ಚಾಗುತ್ತಿದೆ. ಇದರಿಂದ ಬಡವರಿಗೆ ಅನುಕೂಲ ವಾಯಿತಾ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.

ಹಾಗಿದ್ದರೆ ನಿಮ್ಮ ಸರ್ಕಾರ ಸಾರಾಯಿ ಭಾಗ್ಯ ಕರುಣಿಸಲಿದೆಯೇ ಎಂದು ಸಿ.ಟಿ.ರವಿ ಮತ್ತು ಸುನೀಲ್ ಕುಮಾರ್ ಪ್ರಶ್ನಿಸಿದರು.
ಗುಜರಾತ್ ಗಾಂಧಿ ಹುಟ್ಟಿದ ನಾಡು ಎಂಬ ಕಾರಣಕ್ಕೆ 1950ರಿಂದಲೂ ಅಲ್ಲಿ ಪಾನ ನಿಷೇಧ ಇದೆ. ಯಶಸ್ವಿಯಾಗಿದೆಯೇ ಎಂದು ಹೋಗಿ ನೋಡಿಕೊಂಡು ಬನ್ನಿ. ಈ ಹಿಂದೆ ಜನತಾದಳದ ಸರ್ಕಾರದಲ್ಲಿ ಮದ್ಯಪಾನ ನಿಷೇಧದ ಚರ್ಚೆ ಬಂದಾಗ ನನ್ನ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆಯಾಯಿತು. ಅದರಲ್ಲಿ ದೇವೇಗೌಡ, ಸಿಂಧ್ಯಾ, ನಾಣಯ್ಯ ಅವರಿದ್ದರು. ನಾವೆಲ್ಲ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡಿದಾಗ ಎಲ್ಲಿಯೂ ಯಶಸ್ವಿಯಾಗಿರಲಿಲ್ಲ. ಯಾವುದೋ ಒಂದು ರಾಜ್ಯ ಪಾನ ನಿಷೇಧ ಮಾಡಿದರೆ ನೆರೆ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸರಬರಾಜಾಗುತ್ತದೆ. ಅಕ್ರಮ ವಹಿವಾಟು ಹೆಚ್ಚಾಗುತ್ತದೆ. ಸರ್ಕಾರದ ಆದಾಯಕ್ಕೂ ನಷ್ಟವಾಗಲಿದೆ. ಒಂದು ರಾಜ್ಯದ ಪಾನ ನಿಷೇಧದಿಂದ ಜನರ ಆರೋಗ್ಯವೂ ಸುಧಾರಿಸುವುದಿಲ್ಲ. ಆರ್ಥಿಕ ಮಟ್ಟವೂ ಹೆಚ್ಚಾಗುವುದಿಲ್ಲ. ಬದಲಾಗಿ ರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ಪಾನ ನಿಷೇಧವಾಗಬೇಕು. ಪ್ರಧಾನಿ ಮೋದಿ ಅವರಿಗೆ ಬಿಜೆಪಿಯವರು ಹೇಳಿ ಈ ಕೆಲಸ ಮಾಡಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ರಾಜ್ಯದಲ್ಲಂತೂ ಸಂಪೂರ್ಣ ಪಾನ ನಿಷೇಧ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಗದೀಶ್‍ಶೆಟ್ಟರ್ ಮಾತನಾಡಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟವಾಗುತ್ತಿದೆ. ನಿಮ್ಮ ಸರ್ಕಾರದಿಂದ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾಗ ನೀವು ಮುಖ್ಯಮಂತ್ರಿ ಯಾಗಿದ್ದಾಗ ನಿಯಂತ್ರಣವಾಗಿತ್ತೇ ಎಂದು ಸಿಎಂ ತಿರುಗೇಟು ನೀಡಿದರು.
ಇದು ಇಬ್ಬರ ನಡುವೆ ಮಾತಿನ ಚಕಮಕಿ ಕಾರಣವಾಯಿತು. ನಿಮ್ಮ ಕಾಲದಿಂದಲೇ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಆರಂಭವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿಗೆ ಇಳಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.
ರಾಜ್ಯ ಸರ್ಕಾರ ನಿರ್ದಿಷ್ಟ ಪ್ರಮಾಣದ ಮದ್ಯ ಮಾರಾಟ ಮಾಡಲೇಬೇಕು ಎಂದು ಮದ್ಯದಂಗಡಿಗಳಿಗೆ ಗುರಿ ನೀಡಿದೆ. ಇದರಿಂದ ಜನರಿಗೆ ಬಲವಂತವಾಗಿ ಕುಡಿಸುವ ಅನಿವಾರ್ಯತೆ ಮದ್ಯದಂಗಡಿಗಳಿಗೆ ಎದುರಾಗಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು.

ಲೈಸೆನ್ಸ್ ಇಲ್ಲದ ಅಂಗಡಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಅಧಿಕೃತ ಪರವಾನಗಿದಾರರು ಪ್ರತೀ ತಿಂಗಳು ಖರೀದಿಸುವಷ್ಟು ಮದ್ಯ ಖರೀದಿಸಿ ಎಂದು ಇಲಾಖೆ ಸೂಚನೆ ನೀಡಿದೆ. ಹಾಗೆಂದ ಮಾತ್ರಕ್ಕೆ ಬಲವಂತವಾಗಿ ಕುಡಿಸಿ ಎಂದರ್ಥವಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಚರ್ಚೆಯ ನಡುವೆ ಸಿದ್ದರಾಮಯ್ಯ ಅವರು ಸಾರಾಯಿ ನಿಷೇಧ ಮಾಡಿದ್ದು ಬಿಜೆಪಿಯವರಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಾರಾಯಿ ನಿಷೇಧಕ್ಕೆ ವಿರೋಧಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅದನ್ನು ಜಾರಿಗೆ ತಂದರು ಎಂದು ಹೇಳಿಕೆ ನೀಡಿ ಸದನದಲ್ಲೇ ಇದ್ದ ಕುಮಾರಸ್ವಾಮಿ ಅವರನ್ನು ಕುರಿತು ಅಲ್ವೆನ್ರಿ ಎಂದು ಪ್ರಶ್ನಿಸಿದರು. ಇದನ್ನು ವಿರೋಧಿಸಿ ಜಗದೀಶ್‍ಶೆಟ್ಟರ್ ಅವರು ಸದನದಲ್ಲಿಲ್ಲದ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವುದು ನಿಯಮ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಡತದಿಂದ ತೆಗೆಯಿರಿ ಎಂದು ಆಗ್ರಹಿಸಿದರು.
ಇದಕ್ಕೆ ಬಿಜೆಪಿಯ ಶಾಸಕರು ಬೆಂಬಲ ವ್ಯಕ್ತಪಡಿಸಿ ಗದ್ದಲ ಆರಂಭಿಸಿದರು. ತಮ್ಮ ಎಂದಿನ ಶೈಲಿಯಲ್ಲಿ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ, ಸಂಸ್ಕøತಿ ಗೊತ್ತಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆಗೆ ಸಂಸ್ಕøತಿ ಗೊತ್ತಿದೆಯಾ? ನಟಿ ದೀಪಿಕಾ ಪಡುಕೋಣೆ ತಲೆ ಕತ್ತರಿಸಿದವರಿಗೆ ಬಿಜೆಪಿ ನಾಯಕರು ಬಹುಮಾನ ಘೋಷಿಸಿದ್ದಾರೆ. ಇಂಥಹವರಿಂದ ನಾವು ಪಾಠ ಕಲಿಯಬೇಕೇ ಎಂದು ತಿರುಗೇಟು ನೀಡಿದರು. ಇದು ಗದ್ದಲಕ್ಕೆ ಕಾರಣವಾಯಿತು.

ಯಡಿಯೂರಪ್ಪ ಕುರಿತು ನೀಡಿದ ಹೇಳಿಕೆಯನ್ನು ಕಡತದಿಂದ ತೆಗೆಯಬೇಕೆಂದು ಒತ್ತಾಯಿಸಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಏಕಾಂಗಿಯಾಗಿ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಸ್ವಲ್ಪ ಸಮಯದ ನಂತರ ಬಿಜೆಪಿಯ ಇತರೆ ಶಾಸಕರು ನಿದಾನಕ್ಕೆ ಅವರನ್ನು ಹಿಂಬಾಲಿಸಿ ಧರಿಣಿಗೆ ಹೋದರು. ಜೆಡಿಎಸ್‍ನ ವೈ.ಎಸ್.ವಿ.ದತ್ತ ಮಾತನಾಡಿ, ಸಾರಾಯಿ ನಿಷೇಧಕ್ಕೆ ಯಡಿಯೂರಪ್ಪ ಒಪ್ಪಿರಲಿಲ್ಲ ಎಂದು ಹೇಳಿ ಸಿಎಂ ಹೇಳಿಕೆಯನ್ನು ಸಮರ್ಥಿಸಿದರು. ಜೆಡಿಎಸ್‍ನ ಶಾಸಕ ಶಿವಲಿಂಗೇಗೌಡ ದಾಖಲೆಯಿಂದ ಯಾವ ಹೇಳಿಕೆಗಳನ್ನೂ ತೆಗೆಯಬಾರದು ಎಂದು ಒತ್ತಾಯಿಸಿದರು. ದತ್ತ ಅವರು ಮಾತನಾಡಿ, ಬಿಜೆಪಿ ಪ್ರತೀ ದಿನ ದರಣಿ ಮಾಡುತ್ತಲೇ ಇದ್ದರೆ ಮಹದಾಯಿ ಹಾಗೂ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚಿಸುವುದು ಯಾವಾಗ ಎಂದು ಪ್ರಶ್ನಿಸಿದರು. ಆಗ ಗದ್ದಲ, ಗೊಂದಲ ಹೆಚ್ಚಾಗಿ ಬಿಜೆಪಿ ಶಾಸಕರು ಧರಣಿ ಮುಂದುವರೆಸಿದಾಗ ಸಭಾಧ್ಯಕ್ಷರು ಕೆಲ ಕಾಲ ಕಲಾಪ ಮುಂದುವರೆಸಿದರು.

Facebook Comments

Sri Raghav

Admin