ಬೈಕ್ ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ನವ ವಿವಾಹಿತೆ ಸಾವು, ಪತಿ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

mala

ಮಳವಳ್ಳಿ, ನ.21- ವೇಗವಾಗಿ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‍ನಲ್ಲಿದ್ದ ನವ ವಿವಾಹಿತೆ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದು, ಆಕೆಯ ಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ದುರ್ಘಟನೆಯೊಂದು ಪಟ್ಟಣದಲ್ಲಿ ಜರುಗಿದೆ. ತಾಲ್ಲೂಕಿನ ಅಂಗ್ರಾಪುರ ಗ್ರಾಮದ ಸಮೀಪದ ರಾಮೇಗೌಡನದೊಡ್ಡಿ ಗ್ರಾಮದ ವಾಸಿ ಮಹೇಂದ್ರ ಎಂಬಾತನ ಪತ್ನಿ ದಾಕ್ಷಾಯಿಣಿ (26) ಎಂಬಾಕೆಯೇ ಮೃತಪಟ್ಟ ದುರ್ದೈವಿ. ಕಳೆದ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಈಕೆ ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ತನ್ನ ತವರೂರಾದ ನಡುಕಲಪುರ ಗ್ರಾಮಕ್ಕೆ ಪತಿ ಮಹೇಂದ್ರನ ಜೊತೆ ಹೀರೋ ಹೊಂಡ ಬೈಕ್‍ನಲ್ಲಿ ಹೋಗುತ್ತಿದ್ದರು.

ಪಟ್ಟಣದ ಕನಕಪುರ ರಸ್ತೆಯ ಟೋಲ್‍ಗೇಟ್ ಬಳಿ ಬೈಕ್‍ಗೆ ಹಿಂದಿನಿಂದ ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಹೇಂದ್ರ ರಸ್ತೆಹೊರಬದಿಗೆ ಬಿದ್ದರೆ ದಾಕ್ಷಾಯಿಣಿ ರಸ್ತೆ ಒಳಭಾಗಕ್ಕೆ ಬಿದ್ದ ಪರಿಣಾಮವಾಗಿ ಆಕೆಯ ಮೇಲೆ ಬಸ್ಸಿನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದಳೆಂದು ವರದಿಯಾಗಿದೆ. ಗಾಯಾಳು ಮಹೇಂದ್ರನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin