ನಿಜಾಂಶವಿಲ್ಲದ ವಿದ್ಯುತ್ ಹಗರಣ ವರದಿ ಮಂಡನೆಯ ರಹಸ್ಯ ಬಯಲು ಮಾಡುವೆ:ಹೆಚ್.ಡಿ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

kumar
ಬೆಳಗಾವಿ (ಸುವರ್ಣಸೌಧ), ನ.22- ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸದನ ಸಮಿತಿ ನೀಡಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆ ವಿದ್ಯುತ್ ಹಗರಣದ ವರದಿ ಮಂಡನೆ ಮಾಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಇಂತಹ ವರದಿ ಮಂಡಿಸಲು ನಾಲ್ಕು ವರ್ಷಗಳ ಅವಧಿ ಬೇಕಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ವರದಿಯ ಹಿಂದಿನ ಬಂಡವಾಳ ಬಯಲು ಮಾಡುತ್ತೇವೆ ಎಂದು ಅವರು ಹೇಳಿದರು.

ವಿದ್ಯುತ್ ಖರೀದಿಯಲ್ಲಿ ನಷ್ಟವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗಿದೆ. ಆದರೆ, ವರದಿಯಲ್ಲಿ ಯಾವುದೇ ರೀತಿಯ ಸತ್ಯಾಂಶವಿದ್ದಂತೆ ಇಲ್ಲ ಎಂದು ಅವರು ಹೇಳಿದರು. ಈ ವರದಿಗೆ ನಾವು ಸಹಿಯನ್ನೂ ಹಾಕಿಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ವಿವರಗಳನ್ನು ನೀಡುತ್ತೇನೆ ಎಂದು ತಿಳಿಸಿದರು. ಸದನದಲ್ಲಿ ಇಂಧನ ಇಲಾಖೆ, ಕೆರೆ ಒತ್ತುವರಿ ಸಮಿತಿ ವರದಿಯನ್ನು ಮಂಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಕಳಸಾ-ಬಂಡೂರಿ, ಮಹದಾಯಿ ವಿಚಾರವಾಗಿ ಯಾವುದೇ ರೀತಿಯ ಗಂಭೀರ ಚರ್ಚೆ ನಡೆದಿಲ್ಲ. ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಭಾಗದ ಜನರ ಸಮಸ್ಯೆಗಳಿಗೆ ನಾವೆಲ್ಲ ದನಿಯಾಗಬೇಕಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸದನದಲ್ಲಿ ನಿನ್ನೆ ಮಂಡನೆಯಾದ ಇಂಧನ ಇಲಾಖೆ ಸದನ ಸಮಿತಿ ವರದಿ ಮಂಡನೆಗೂ ಮುನ್ನವೇ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವರದಿ ಮಂಡನೆಗೂ ಮುನ್ನ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸದನ ಸಮಿತಿ ಸದಸ್ಯರಾಗಿದ್ದ ಕುಮಾರಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ ವರದಿಗೆ ಸಹಿ ಹಾಕಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ವರದಿಯಲ್ಲಿ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಹಣಿಯಲು ಟಾರ್ಗೆಟ್ ಮಾಡಲಾಗಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ನಿನ್ನೆ ಮಂಡನೆಯಾದ ವರದಿಯಲ್ಲಿ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿಎಸ್‍ವೈ ಸರ್ಕಾರದ ಅವಧಿಯಲ್ಲಿ ನಡೆದ ವಿದ್ಯುತ್ ಹಗರಣದಲ್ಲಿ 30,933 ಕೋಟಿ ನಷ್ಟ ಉಂಟಾಗಿದೆ ಎಂದು ಉಲ್ಲೇಖವಾಗಿದ್ದು, ಮೂರೂ ಪಕ್ಷಗಳಿಗೆ ಕರೆಂಟ್ ಶಾಕ್ ಕೊಟ್ಟಿದೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು.

Facebook Comments

Sri Raghav

Admin