ಡಿಜಿಟಲೀಕರಣದಿಂದ ಸುಲಭವಾಯ್ತು ಆಡಳಿತ, ಉಳಿತಾಯವಾಯ್ತು 65 ಸಾವಿರ ಕೋಟಿ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

modi-1
ನವದೆಹಲಿ, ನ.23- ತಂತ್ರಜ್ಞಾನ, ಬ್ಯಾಂಕ್ ಖಾತೆಗಳು ಹಾಗೂ ಆಧಾರ್ ಬಳಸಿ ಸರ್ಕಾರದ ಫಲಾನುಭವಗಳು ಮತ್ತು ಪ್ರಯೋಜನಗಳನ್ನು ನೇರವಾಗಿ ವರ್ಗಾವಣೆ ಮಾಡಿರುವುದರಿಂದ 10 ಶತಕೋಟಿ ಡಾಲರ್‍ಗಳಷ್ಟು (65,000 ಕೋಟಿ ರೂ.ಗಳು) ಭಾರೀ ಮೊತ್ತದ ಹಣ ಉಳಿಸಲು ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಧಾನಿ ನವದೆಹಲಿಯಲ್ಲಿ ಇಂದು ನಡೆದ ಸೈಬರ್ ಸ್ಪೇಸ್ ಕುರಿತ ಜಾಗತಿಕ ಸಮಾವೇಶ ಉದ್ಘಾ ಟಿಸಿ ಪ್ರಧಾನಿ ಮಾತನಾಡಿದರು. ತಂತ್ರ ಜ್ಞಾನವು ಅಡೆ-ತಡೆಗಳನ್ನು ನಿವಾರಿಸಿದೆ. ಪರಿಣಾಮಕಾರಿ ಸೇವಾ ಪೂರೈಕೆ, ಉತ್ತಮ ಆಡಳಿತ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆ ಸಾಧಿಸಲು ಸಾಧ್ಯವಾಗಿದೆ ಮೋದಿ ತಿಳಿಸಿದರು. ಆಧಾರ್ ಬಳಕೆಯಿಂದ ದೇಶವಾಸಿಗಳಿಗೆ ಸಾಕಷ್ಟು ರೀತಿಯಲ್ಲಿ ಬಹೂಪಯೋಗವಾಗುತ್ತಿದೆ. ಆಧಾರ್ ಬಳಸುವ ಮೂಲಕ ಸಬ್ಸಿಡಿಗಳ ನೀಡಿಕೆಯಲ್ಲೂ ಮಹತ್ವದ ಸಾಧನೆ ಮಾಡಲಾಗಿದೆ. ಇದರಿಂದಾಗಿ 10 ಶತಕೋಟಿ ಡಾಲರ್‍ಗಳು ಉಳಿತಾಯವಾಗಿದೆ ಎಂದು ತಿಳಿಸಿದರು.

ದೇಶದ ನಾಗರಿಕರಿಗೆ ಡಿಜಿಟಲ್ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಬಲೀಕರಣ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಘೋಷಿಸಿದರು. ಡಿಜಿಟಲ್ ತಂತ್ರಜ್ಞಾನದಿಂದ ದೇಶದಲ್ಲಿ ದೊಡ್ಡ ಮಟ್ಟದ ಕ್ರಾಂತಿಯಾಗುತ್ತಿದೆ. ಜನಧನ್ ಖಾತೆಗಳು, ಮೊಬೈಲ್ ಸಂಖ್ಯೆಗಳು ಹಾಗೂ ಆಧಾರ್ ಬಳಕೆಯಿಂದ ಸೋರಿಕೆ ನಿಂತಿದ್ದು, ಇದರಿಂದ 10 ಶತಕೋಟಿ ಡಾಲರ್ ಹಣ ಉಳಿತಾಯವಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಇದೊಂದು ಗಂಭೀರ ಆತಂಕವಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಸಲು ಭಯೋತ್ಪಾದಕರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ತಂತ್ರಜ್ಞಾನವು ಭಯೋತ್ಪಾದಕರಿಗೆ ಆಟದ ಮೈದಾನವಾಗಬಾರದು ಎಂದು ಹೇಳಿದರು.

ಡಿಜಿಟಲ್ ತಂತ್ರಜ್ಞಾನ ಬಳಸಿ ಶಿಕ್ಷಣ ಮತ್ತು ಆರೋಗ್ಯ ಆರೈಕೆ ಕ್ಷೇತ್ರಗಳಲ್ಲಿ ಹೊಸ ಹೊಸ ಅನ್ವೇಷಣೆಗಳು ಮತ್ತು ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಭಾರತ ಉತ್ಸುಕವಾಗಿದೆ ಎಂದು ಪ್ರಧಾನಿ ತಿಳಿಸಿದರು. ಈ ಜಾಗತಿಕ ಸಮಾವೇಶದಲ್ಲಿ ವಿಶ್ವದ ಅನೇಕ ರಾಷ್ಟ್ರಗಳ ಸೈಬರ್ ಮತ್ತು ಡಿಜಿಟಲ್ ಕ್ಷೇತ್ರದ ಪರಿಣಿತರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

Facebook Comments

Sri Raghav

Admin