ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ದೇಶ ರಾಮರಾಜ್ಯ ಆಗಲೇಬೇಕು, ಧರ್ಮಸಂಸತ್ ಸಭೆಯಲ್ಲಿ ವಿ.ಹೆಚ್.ಪಿ ಮುಖಂಡ ತೊಗಾಡಿಯಾ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

dharma
ಉಡುಪಿ, ನ.24- ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಆಗಲೇಬೇಕು. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ನನಸಾಗಬೇಕು. ಅದೇ ರೀತಿ ಈ ದೇಶವನ್ನು ರಾಮರಾಜ್ಯವನ್ನಾಗಿ ರೂಪಿಸಲು ಹಿಂದೂ ಧರ್ಮ ಶ್ರಮಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಘೋಷಿಸಿದರು. ಇಂದಿಲ್ಲಿ ಆರಂಭವಾದ ಧರ್ಮ ಸಂಸದ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹಿಂದೂಗಳು ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು. ಉಡುಪಿಯಲ್ಲಿ ಇಂದು ಆರಂಭವಾದ ಎರಡು ದಿನಗಳ ಧರ್ಮ ಸಂಸದ್ ಮಹಾ ಅಧಿವೇಶನ ಈಗ ಎರಡನೆ ಬಾರಿಗೆ ನಡೆಯುತ್ತಿದ್ದು, ಈ ಸಭೆಯಲ್ಲಿ ದೇಶಾದ್ಯಂತ ಸುಮಾರು 1200ಕ್ಕೂ ಹೆಚ್ಚು ಸ್ವಾಮೀಜಿಗಳು, ಸಾಧು-ಸಂತರು ಹಾಗೂ ಅನೇಕ ಪೀಠಾಧಿಪತಿಗಳು ಪಾಲ್ಗೊಂಡಿದ್ದಾರೆ.

ಉಡುಪಿಯಲ್ಲಿ ಧರ್ಮ ಸಂಸದ್ ನಡೆಯುತ್ತಿರುವುದು ಇದು ಎರಡನೆ ಬಾರಿ. ಇಡೀ ಕೃಷ್ಣನ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ದೇಶದ ನಾನಾ ಮೂಲೆಗಳಿಂದ ಆಗಮಿಸಿರುವ ಕಾವಿಧಾರಿಗಳು ಉಡುಪಿಯ ಈ ವೈಭವೋಪೇತ ವ್ಯವಸ್ಥೆ ನೋಡಿ ಕಣ್ತುಂಬಿಕೊಂಡಿದ್ದಾರೆ. ಉಡುಪಿಯ ರಾಯಲ್ ಗಾರ್ಡನ್‍ನಲ್ಲಿ ಪ್ರಧಾನ ವೇದಿಕೆ ನಿರ್ಮಾಣವಾಗಿದ್ದು, ವೇದಿಕೆ ಮೇಲೆ ನೂರಾರು ಜನ ಸ್ವಾಮೀಜಿಗಳು, ಸಾಧು-ಸಂತರು ಆಸೀನರಾಗಿದ್ದರು. ಈ ಸಂಸದ್ ಸಭೆಯಲ್ಲಿ ಪ್ರಮುಖವಾಗಿ ದೇಶದಲ್ಲಿ ಕಾಡುತ್ತಿರುವ ಅಸ್ಪೃಶ್ಯತೆ, ಗೋ ರಕ್ಷಣೆ, ರಾಮಮಂದಿರ ನಿರ್ಮಾಣ ಇವುಗಳ ಬಗ್ಗೆ ಮಹತ್ವದ ಚರ್ಚೆಗಳು ನಡೆಯಲಿದ್ದು, ಈಗ ಇಡೀ ದೇಶದ ಚಿತ್ತ ಉಡುಪಿಯತ್ತ ಕೇಂದ್ರೀಕೃತವಾಗಿದೆ.

ಈ ಮಧ್ಯೆ ಕಳೆದ ರಾತ್ರಿ ಉಡುಪಿಗೆ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ತಡರಾತ್ರಿ ಪೇಜಾವರ ಪರ್ಯಾಯ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಉಡುಪಿಯ ಧರ್ಮ ಸಂಸದ್ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಭೆಯನ್ನು ಉದ್ಘಾಟಿಸಿದರು.

Facebook Comments

Sri Raghav

Admin