ಕಸಾಪ ಬಿಕ್ಕಟ್ಟು ನಿಭಾಯಿಸುವ ಕೆಚ್ಚು ಕನ್ನಡಿಗರ ಆಂತಃಶಕ್ತಿಗಿದೆ : ಸಮ್ಮೇಳಾನಧ್ಯಕ್ಷ ಪ್ರೊ.ಚಂಪಾ

ಈ ಸುದ್ದಿಯನ್ನು ಶೇರ್ ಮಾಡಿ

champa

ಮೈಸೂರು, ನ.24-ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಆಯ್ಕೆಯಾಗಿ ಬರುತ್ತಿರುವವರು ಕನ್ನಡದ ಕಟ್ಟಾಳುಗಳೇ. ಸಂಸ್ಥೆಗಳ ಬದುಕಿನಲ್ಲೂ ಬಿಕ್ಕಟ್ಟುಗಳು ಬರುವುದು ಸಹಜ. ಅವುಗಳನ್ನು ಸ್ಥೈರ್ಯದಿಂದ ನಿಭಾಯಿಸುವ ಕೆಚ್ಚು ಕೂಡ ಕನ್ನಡಿಗರ ಆಂತಃಶ್ಶಕ್ತಿಯಿಂದ ಬರಲು ಸಾಧ್ಯ ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷರಾದ ಪ್ರೊ. ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಸಮೇಳಾಧ್ಯಕ್ಷರ ಭಾಷಣ ಮಾಡಿದ ಪ್ರೊ. ಚಂಪಾ ಕಸಾಪ ಮತ್ತು ಅದರ ಅಧ್ಯಕ್ಷ ಡಾ. ಮನುಬಳಿಗಾರ್ ಅವರ ಸಾಧನೆಯನ್ನು ಅವರು ಪ್ರಶಂಸಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ ಈ ಪ್ರಮಾಣದಲ್ಲಿ ಬಲಾಢ್ಯವಾಗಿ ಬೆಳೆದಿರಲು ಮುಖ್ಯ ಕಾರಣವೆಂದರೆ ನಮ್ಮ ಭಾಷಿಕ ಸಮುದಾಯ ಇದನ್ನು ನಮ್ಮದು ಎಂದು ಅಪ್ಪಿಕೊಂಡಿರುವುದು. ಜೊತೆಗೆ ಆಯಾ ಕಾಲದ ಪ್ರಭುತ್ವಗಳೂ ಎಲ್ಲ ರೀತಿಯಲ್ಲಿ ಇದನ್ನು ಪೋಷಿಸಿರುವುದರಿಂದ. ನಾಡು ಒಂದಾದ ಮೇಲಂತೂ ಈ ಪ್ರಕ್ರಿಯೆ ತೀವ್ರವಾಗಿದೆ ಎಂದು ಅವರು ಬಣ್ಣಿಸಿದರು.
ಗೋಕಾಕಚಳುವಳಿಯ ನಂತರ ಅಧಿಕಾರಕ್ಕೆ ಬಂದ ಜನತಾ ಸರಕಾರ ಕನ್ನಡದ ರಕ್ಷಣೆಗೆಂದೇ ಕನ್ನಡ ಕಾವಲು ಸಮಿತಿ ರಚಿಸಿದ್ದು ಒಂದು ಮಹತ್ವದ ಬೆಳವಣಿಗೆ. ದೇವರಾಜಅರಸು ಅವರು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು. ಕನ್ನಡ ಪುನರುಜ್ಜೀವನಕ್ಕೆ ನಾಂದಿ ಹಾಡಿದವರು ಅವರೇ. ಕಾವಲುಸಮಿತಿ ಕಾಲಾಂತರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಯಿತು. ಕಾವಲು ಸಮಿತಿಯ ಮೊಟ್ಟ ಮೊದಲ ಅಧ್ಯಕ್ಷರಾಗಿದ್ದವರು ನಮ್ಮ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಂದು ಚಂಪಾ ಹೇಳಿದರು.

ಸಿದ್ದರಾಮಯ್ಯನವರ ಸಾರ್ವಜನಿಕ ಜೀವನ ಶುರುವಾದದ್ದೇ ಸಮಾಜವಾದಿ ಚಳುವಳಿ ಮತ್ತು ಕನ್ನಡ ಚಳುವಳಿಯಲ್ಲಿನ ಪಾಲುಗಾರಿಕೆಯ ಮೂಲಕ. ಅವರ ನೇತೃತ್ವದ ಇಂದಿನ ಸರಕಾರ ಕನ್ನಡ -ಕನ್ನಡಿಗ- ಕರ್ನಾಟಕ ಎಂಬ ಸಮಷ್ಟಿ ಪರಿಕಲ್ಪನೆಗೆ ಹೊಸ ಜೀವ ತುಂಬುವತ್ತ ಇಡುತ್ತಿರುವ ದಿಟ್ಟ ಹೆಜ್ಜೆಗಳನ್ನು ನಾಡು ಗಮನಿಸಿದೆ, ಮೆಚ್ಚಿಕೊಂಡಿದೆ, ಈ ಹೆಜ್ಜೆ ದಾಪುಗಾಲಿನ ಹೆಜ್ಜೆಯಾಗಲಿ ಎಂದು ಹಾರೈಸಿದೆ ಎಂದು ಮುಖ್ಯಮಂತ್ರಿಯವರನ್ನು ಅವರು ಪ್ರಶಂಸಿದರು. ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಪರಿಷತ್ತಿಗೆ ಎಲ್ಲ ಬಗೆಯ ಅನುಕೂಲ ಒದಗಿಸಿವೆ. ಜೊತೆಗೆ, ಸರಕಾರದ ಅನುದಾನ ಪಡೆದರೂ ಒಂದು ಸ್ವಾಯತ್ತ್ತ ಸಂಸ್ಥೆಯಾಗಿಯೇ ಪರಿಷತ್ತು ಬೆಳೆದಿದೆ. ಸರಕಾರಗಳು ಪರಿಷತ್ತಿನ ಆಂತರಿಕ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿಲ್ಲ. ಇತ್ತೀಚಿನ ದಿನಮಾನದಲ್ಲಿ ಇಂಥ ಪ್ರಯತ್ನ ಆಗೀಗ ನಡೆಯುತ್ತಿದ್ದರೂ ಅಂಥದ್ದನ್ನು ವಿಫಲಗೊಳಿಸುವ ಅಂತಃಶ್ಶಕ್ತಿಯೂ ಪರಿಷತ್ತಿಗಿದೆ ಎಂದು ಅವರು ತಿಳಿಸಿದರು. ಪರಿಷತ್ತಿನ ಸಮ್ಮೇಳನಗಳ ಕೊನೆಯ ದಿನ ಸ್ವೀಕರಿಸಲಾಗುವ ಈ ಗೊತ್ತುವಳಿಗಳ ಅನುಷ್ಠಾನ ಆಗುತ್ತಿಲ್ಲ ಎಂಬ ಟೀಕೆ ಸಾರ್ವತ್ರಿಕವಾಗಿದೆ. ಮುಖ್ಯಮಂತ್ರಿ ಅವರು ಅನೇಕ ವೇದಿಕೆಗಳಲ್ಲಿ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ. ಈ ಬದ್ಧತೆ ಸರಕಾರದ ಇಚ್ಛಾಶಕ್ತಿಯಾಗಿ ರೂಪಾಂತರಗೊಳ್ಳಲಿ ಎಂಬುದು ನಮ್ಮೆಲ್ಲರ ಹಕ್ಕೊತ್ತಾಯ ಎಂದು ಪ್ರೊ. ಪಾಟೀಲ್ ಹೇಳಿದರು.

Facebook Comments

Sri Raghav

Admin