ನೈಸ್ ಹಗರಣದ ಜಂಟಿ ಸದನ ಸಮಿತಿಯ ವರದಿಯ ಚರ್ಚೆಗಾಗಿ ಧರಣಿ ನಡೆಸಿದ ಜೆಡಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

jds

ಬೆಳಗಾವಿ(ಸುವರ್ಣಸೌಧ), ನ.24- ನೈಸ್ ಹಗರಣ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನೀಡಿರುವ ಜಂಟಿ ಸದನ ಸಮಿತಿಯ ವರದಿ ಆಧರಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ವಿಧಾನಪರಿಷತ್‍ನಲ್ಲಿಂದು ಜೆಡಿಎಸ್ ಧರಣಿ ನಡೆಸಿತು. ಕಲಾಪದ ಆರಂಭದಲ್ಲೇ ಜೆಡಿಎಸ್‍ನ ಹಿರಿಯ ಶಾಸಕರಾದ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಪುಟ್ಟಣ್ಣ, ಚೌಡಾರೆಡ್ಡಿ, ರಮೇಶ್‍ಬಾಬು, ಶರವಣ ಮತ್ತಿತರರು ವಿಷಯ ಪ್ರಸ್ತಾಪಿಸಿ ನೈಸ್ ಹಗರಣದ ಕುರಿತು ಚರ್ಚೆಗೆ ನಿನ್ನೆ ನೋಟಿಸ್ ನೀಡಲಾಗಿತ್ತು. ನಿರ್ದಿಷ್ಟ ಕಾಲವಾಧಿಯೊಳಗೆ ನೋಟಿಸ್ ಬಂದಲ್ಲ ಎಂದು ಸೂಚನೆಯನ್ನು ತಿರಸ್ಕರಿಸಲಾಗಿದೆ. ಇಂದು ಮತ್ತೆ ನೋಟಿಸ್ ನೀಡಿದ್ದೇವೆ. ಚರ್ಚೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಭಾನಾಯಕ ಎಂ.ಆರ್.ಸೀತಾರಾಮ್ ಅವರು, ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜೆಡಿಎಸ್‍ನ ಸದಸ್ಯ ರಮೇಶ್‍ಬಾಬು ಶೂನ್ಯವೇಳೆಯಲ್ಲಿ ಗಮನ ಸೆಳೆದಿದ್ದರು. ಅದಕ್ಕೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಉತ್ತರ ನೀಡಿದ್ದಾರೆ. ಅದೇ ವಿಷಯಕ್ಕೆ ಸಂಬಂಧಪಟ್ಟಂತೆ ನಿಲುವಳಿ ಸೂಚನೆಯಡಿ ಚರ್ಚೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು. ಇದಕ್ಕೆ ಅನುಮೋದನೆ ನೀಡಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಆಗಿರುವುದರಿಂದ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ. ಜತೆಗೆ ನಿಯಮ 330 ಅಡಿ ಕೂಡ ಸೂಚನಾ ಪತ್ರ ಬಂದಿದೆ, ಅದನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು. ಇದನ್ನು ಒಪ್ಪದ ಜೆಡಿಎಸ್ ಸದಸ್ಯರು, ಇದು 30ಸಾವಿರ ಕೋಟಿ ಮೊತ್ತದ ಹಗರಣ. ಸರ್ಕಾರದ ಸಚಿವರ ನೇತೃತ್ವದ ಸದನ ಸಮಿತಿಯೇ ವರದಿ ನೀಡಿದೆ. ನೈಸ್ ಸಂಸ್ಥೆಯ ಮುಖ್ಯಸ್ಥ ಒಂದು ಎಕರೆಯನ್ನು 20 ಕೋಟಿಗೆ ಮಾರಾಟ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ಇಂತಹ ಹಗರಣದ ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ಹೋದರು.

ಆಡಳಿತ ಪಕ್ಷದ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಮಾತನಾಡಿ, ನೈಸ್ ಹಗರಣದ ಬಗ್ಗೆ ಎಲ್ಲರಿಗೂ ಆತಂಕ ಇದೆ. ಆಡಳಿತ ಪಕ್ಷದಲ್ಲೂ ಚರ್ಚೆಗೆ ವಿರೋಧ ಇಲ್ಲ. ಒಂದಷ್ಟು ಸಮಯ ನಿಗದಿ ಮಾಡಿ ಎಂದು ಮನವಿ ಮಾಡಿದರು. ನಿಯಮಗಳ ತಾಕಲಾಟ ಎದುರಾದಾಗ ಜೆಡಿಎಸ್ ನಾಯಕ ಬಸವರಾಜಹೊರಟ್ಟಿ ಅವರು, ನಿಲುವಳಿ ಸೂಚನೆಯಡಿ ಅಲ್ಲದೇ ಇದ್ದರೂ ಯಾವುದಾದರೂ ನಿಯಮದಡಿ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡಿ. ಅವಕಾಶ ನೀಡುವ ಸಾರ್ವಭೌಮ ಅಧಿಕಾರ ನಿಮಗಿದೆ. ಈ ಮೊದಲು ಹಲವಾರು ಇಂತಹ ವಿಷಯಗಳು ಎದುರಾದಾಗ ಸಮಯಾವಕಾಶ ನೀಡಿದ್ದೀರಾ. ಈಗಲೂ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಕೆ.ಟಿ.ಶ್ರೀಕಂಠೇಗೌಡ ಅವರು, ಈಗಾಗಲೇ ನೀಡಿರುವ ನಿಲುವಳಿ ಸೂಚನೆಯನ್ನೇ ಸಾರ್ವಜನಿಕ ಮಹತ್ವದ ವಿಷಯವನ್ನಾಗಿ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಿ ಎಂದು ಸಲಹೆ ನೀಡಿದಾಗ. ಆ ರೀತಿ ಸೂಚನೆಗಳನ್ನು ಬದಲಾವಣೆ ಮಾಡಲು ಅವಕಾಶ ಇಲ್ಲ. ಬೇರೆ ರೂಪದಲ್ಲಿ ನೋಟಿಸ್ ನೀಡಿ ಎಂದು ಸಭಾಪತಿ ಸಲಹೆ ನೀಡಿದರು. ಬಸವರಾಜಹೊರಟ್ಟಿ ಅವರ ಕಳಕಳಿಯ ಮನವಿಗೆ ಮಣಿದ ಸಭಾಪತಿ ಅವರು, ಸೂಕ್ತ ನೋಟಿಸ್ ಆಧರಿಸಿ ಅರ್ಧಗಂಟೆ ಕಾಲ ಚರ್ಚೆಗೆ ಸಮಯ ನಿಗದಿ ಮಾಡುವುದಾಗಿ ಭರವಸೆ ನೀಡಿದ ನಂತರ ತೃಪ್ತರಾದ ಜೆಡಿಎಸ್ ಸದಸ್ಯರು ಧರಣಿ ಕೈ ಬಿಟ್ಟು ಕಲಾಪದಲ್ಲಿ ಭಾಗವಹಿಸಿದರು.

Facebook Comments

Sri Raghav

Admin