ಸಂಸ್ಕೃತ, ಇಂಗ್ಲಿಷ್, ಹಿಂದಿ ಕನ್ನಡ ಭಾಷೆಯ ವೈರಿಗಳು : ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂಪಾ

ಈ ಸುದ್ದಿಯನ್ನು ಶೇರ್ ಮಾಡಿ

kanna-2

ಮೈಸೂರು (ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪ), ನ.24- ಸರ್ಕಾರಿ ಶಾಲೆಗಳ ಸಬಲೀಕರಣ, ಡಾ.ಸರೋಜಿನಿ ಮಹಿಷಿ ಪರಿಷ್ಕತ ವರದಿ ಹಾಗೂ ಸರ್ಕಾರದ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಅಳವಡಿಕೆಯ ವರದಿ-ಇವುಗಳ ಅನುಷ್ಠಾನ, ಕನ್ನಡ ಚಳುವಳಿ ಎಂಬುದು ಕೇವಲ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಉಳಿವಿಗಾಗಿ ಎಂಬ ಸೀಮಿತ ಚೌಕಟ್ಟನ್ನು ಮೀರಿ ಈ ನಾಡ ಜನತೆಯ ಬದುಕಿನ ಸಕಲ ಮಗ್ಗಲುಗಳನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಬೇಕು, ಕರ್ನಾಟಕದಲ್ಲಿ ಮಾತೃಭಾಷೆಯಾಗಿ ಕನ್ನಡ ಹಾಗೂ ಮಾಧ್ಯಮವಾಗಿ ನಾಡ ಭಾಷೆ ಜಾರಿಗೆ ಬರಬೇಕು-ಎಂಬ ಹಕ್ಕೊತ್ತಾಯಗಳು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಚಂದ್ರಶೇಖರ ಪಾಟೀಲ್ ಅವರ ಭಾಷಣದ ಮುಖ್ಯಾಂಶಗಳು…

ನಾಡಿನ ಸಾಂಸ್ಕೃತಿಕ ರಾಜಧಾನಿ ಮತ್ತು ಮಲ್ಲಿಗೆ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪ, ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಅಧ್ಯಕ್ಷರ ಭಾಷಣ ಮಾಡಿದ ಪ್ರೊ.ಚಂಪಾ, ಕನ್ನಡದ ಆಗಿನ ಮತ್ತು ಈಗಿನ ಪರಿಸ್ಥಿತಿಯನ್ನು ತುಲನೆ ಮಾಡುತ್ತಾ ಕರುನಾಡು ಪ್ರಸ್ತುತ ಎದುರಿಸುತ್ತಿರುವ ಸವಾಲು ಮತ್ತು ಸನ್ನಿವೇಶಗಳ ಬಗ್ಗೆ ಬಹು ಅರ್ಥಗರ್ಭಿತವಾಗಿ ಮಾತನಾಡಿದರು. ಒಂದೂವರೆ ಶತಕದ ಹಿಂದೆ ಈ ಕತ್ತಲೆಯ ಖಂಡಕ್ಕೆ ಸಮಾನತೆ, ಸ್ವಾತಂತ್ರ, ಪ್ರಜಾಪ್ರಭುತ್ವ, ವಿಚಾರವಾದ, ಮಾನವತಾವಾದಗಳ ಹೊಸ ಮೌಲ್ಯಗಳನ್ನು ತಂದ ಇಂಗ್ಲಿಷ್ ಭಾಷೆ, ಸ್ವಾತಂತ್ರ್ಯಾನಂತರದ ಇಂಡಿಯಾದಲ್ಲಿ ಒಂದು ಕೃತ್ರಿಮ ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಿರುವುದು ಈ ದೇಶದ ದುರಂತವೋ ಏನೋ ತಿಳಿಯದಂತಾಗಿದೆ ಎಂದು ಅವರು ವಿಷಾದಿಸಿದರು.

kanna

ಕನ್ನಡ, ತಮಿಳು, ಬಂಗಾಲಿ ಭಾಷೆಗಳ ಹಾಗೇ ಇನ್ನೊಂದು ಭಾಷೆಯಾದ ಹಿಂದೀ, ಉತ್ತರ ಭಾರತದ ಹಿಂದೀ ಸರ್ವಾಧಿಕಾರಿಗಳ ಕೈಯಲ್ಲಿನ ದಮನಕಾರಿ ಅಸ್ತ್ರವಾಗುತ್ತಿದೆ. ಕನ್ನಡ ಭಾಷೆಗೆ, ಬದುಕಿಗೆ, ಸಂಸ್ಕೃತಿಗೆ ಪೂರಕ ಶಕ್ತಿಗಳಾಗಬಲ್ಲ ಈ ಮೂರೂ ಭಾಷೆಗಳು(ಸಂಸ್ಕೃತ, ಇಂಗ್ಲಿಷ್, ಹಿಂದಿ)- ಇಂದು ಕನ್ನಡದ `ಕಡುವೈರಿ’ಗಳಾಗಿರುವುದಕ್ಕೆ ನಮ್ಮ ಇಂದಿನ ಕೇಂದ್ರೀಕೃತ ವ್ಯವಸ್ಥೆಯೇ ಕಾರಣ ಎಂದು ಪ್ರೊ. ಚಂಪಾ ಆರೋಪಿಸಿದರು. ಕೇವಲ ಚಳವಳಿಗಳ ಮೂಲಕವೇ ಕನ್ನಡದ ಕೆಲಸ ಆಗಬೇಕೇ ನಮ್ಮ ಅಧಿಕಾರಿ ಗಳ, ಜನಪ್ರತಿನಿಧಿಗಳ, ಮಂತ್ರಿಗಳ ಸಹಜಧರ್ಮವಾಗಿ ಕನ್ನಡ ಅರಳಬೇಕು. ಇದು ಸಾಧ್ಯವಾಗುವುದು ನಮ್ಮ ನಾಡಿನಲ್ಲಿ ನಮ್ಮದೇ ಆದ ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ. ನಮ್ಮ ನೆಲದ ಸಾರವನ್ನು ಹೀರಿ, ನಮ್ಮ ಹವೆಯನ್ನುಂಡು, ನಮ್ಮ ಆಕಾಶದಲ್ಲಿ ತಮ್ಮ ಟೊಂಗೆಗಳನ್ನು ಹರಡಿ, ನಮ್ಮ ಹೂಗಳ ಸುವಾಸನೆ ಬೀರಬಲ್ಲ ಒಂದು ವೃಕ್ಷವಾಗಿ, ಒಂದು ನಿರ್ಣಾಯಕ ರಾಜಕೀಯ ಶಕ್ತಿಯಾಗಿ ನಮ್ಮ ಕನ್ನಡ ಶಕ್ತಿ ಕ್ರೋಡೀಕರಣಗೊಂಡಾಗ ಮಾತ್ರ ಇದು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

kanna-1

ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ನಮ್ಮ ದೇಶದ ಸ್ವಾತಂತ್ರೋತ್ತರದ ಅರ್ಧ ಶತಮಾನದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಏಕಪಕ್ಷ ಸರ್ವಾಧಿಕಾರದ ಹಂತ ಮಾಯವಾಗಿ ಭಾರತಕ್ಕೆ ನಿಜವಾದ ಒಕ್ಕೂಟ ರಾಷ್ಟ್ರದ ಸ್ವರೂಪ ಬರುತ್ತಿರುವುದು, ರಾಜ್ಯಗಳು ಸ್ವಾಯತ್ತತೆಯ ಬೇಡಿಕೆ ಮಂಡಿಸುತ್ತಿರುವುದು, ಭಾಷೆ ಆಧಾರಿತ ರಾಷ್ಟ್ರೀಯತೆಯ ಪರಿಕಲ್ಪನೆ ಹರಡುತ್ತಿರುವುದು – ಇವೆಲ್ಲವುಗಳ ಚೌಕಟ್ಟಿನಲ್ಲಿ ಕನ್ನಡ ನಾಡಿನ ಅರ್ಥಿಕತೆ, ರಾಜಕೀಯ, ಸಾಮಾಜಿಕ ವಿನ್ಯಾಸ, ಭಾಷೆಯ ಸ್ಥಿತಿಗತಿಗಳ ಬಗ್ಗೆ ನಾವು ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಬೇಕಾಗಿದೆ ಎಂದು ಅವರು ಕರೆ ನೀಡಿದರು. ತಮಿಳರ ವಿರುದ್ಧ ಹೋರಾಡುವುದೇ ಕನ್ನಡ ಚಳವಳಿ ಎಂಬ ಮಿಥ್ಯೆ ಅಳಿದುಹೋಗಿ, ನಮ್ಮ ನಿಜವಾದ ಶತ್ರುಗಳಾದ ಹಿಂದೀ ವಲಯದ ವ್ಯಾಪಾರಿ ವರ್ಗ. ಜಾಗತೀಕರಣದ ಸೋಗಿನಲ್ಲಿ ಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ನಮ್ಮ ದೃಷ್ಟಿಯನ್ನೀಗ ಕೇಂದ್ರೀಕರಿಸಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷರು ಸಲಹೆ ಮಾಡಿದರು.

ಕೇಸರೀಕರಣದಿಂದ ಸಂಕಷ್ಟ ಪರಿಸ್ಥಿತಿ ಉಲ್ಬಣ: ಬಂಡಾಯ ಸಂಘಟನೆ ಈಗ ಅಸ್ತಿತ್ವದಲ್ಲಿ ಇಲ್ಲ, ನಿಜ ಆಗ ಎದುರಾಗಿದ್ದ ಸಾವಲುಗಳು ನಮ್ಮ ರಾಜ್ಯದ ಮತ್ತು ದೇಶದ ಚೌಕಟ್ಟಿಗೆ ಸೀಮಿತವಾಗಿದ್ದವು. ಈಗ ಜಾಗತಿಕ ವ್ಯಾಪ್ತಿ ಲಭ್ಯವಾಗಿದೆ ಅದಕ್ಕೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳಿಗೆ ಈಗ ಕೇಸರೀಕರಣ(ಕೋಮುವಾದ)ವೂ ಸೇರಿಕೊಂಡು ಪರಿಸ್ಥಿತಿ ಉಲ್ಬಣಗೊಂಡಿದೆ. ಹೀಗಾಗಿ ಹೊಸ ಪೀಳಿಗೆಯೆ ಸಂವೇದನೆಗಳಲ್ಲೂ ಆಗಿನ ಬಂಡಾಯದ ಆಶಯಗಳು ಪ್ರವಹಿಸುತ್ತಲೇ ಇವೆ- ಎಂಬುದು ಸ್ಪಷ್ಟ. ಇವನ್ನೆಲ್ಲ ಕ್ರೋಢೀಕರಿಸಲು ನಿರ್ದಿಷ್ಟ ದಿಕ್ಕು-ದೆಸೆ ನೀಡಲು ಮತ್ತೆ ಬಂಡಾಯ ಸಂಘಟನೆ ಮರುಹುಟ್ಟು ಪಡೆಯವುದು ಇಂದಿನ ಅನಿವಾರ್ಯವಾಗಿದೆ ಅವರು ಹೇಳಿದರು. ಶತಮಾನಗಳುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿಯೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬದುಕಿ ಉಳಿದಿವೆ- ಅಂತ ಕೆಲವರು ಹೇಳುತ್ತಾರೆ. ಅವರ ದೃಷ್ಟಿನಲ್ಲಿ ಈ ನಿಟ್ಟಿನಲ್ಲಿ ಅನಗತ್ಯ ಆತಂಕ ಬೇಡ; ಆದರೆ ಇವತ್ತಿನ ಜಾಗತೀಕರಣದ ಮಹಾ ಆಘಾತವನ್ನು ಅರಗಿಸಿಕೊಳ್ಳುವಷ್ಟು ಶಕ್ತಿ ನಮ್ಮ ಭಾಷೆ ಹಾಗೂ ಬದುಕಿಗೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ನ್ನಡಿಗರೆಲ್ಲ ಅರಿತುಕೊಂಡ ಒಂದು ವಾಸ್ತವವಂತೂ ಇದೆ. ನಮಗೂ ಚಳುವಳಿಗೂ ಬಿಡಲಾರದ ನಂಟು. ಕನ್ನಡ ಚಳುವಳಿ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದು ಪಡೆಯಬೇಕಾದ ಆಯಾಮಗಳೆಂದರೆ: ಭಾಷಾ ಕೇಂದ್ರಿತವಾಗದೆ ನಾಡಿನ ಸಮಸ್ತ ಸಮಸ್ಯೆಗಳಿಗೆ ಸ್ಪಂದಿಸಬೇಕು. ರಾಜಧಾನಿ ಕೇಂದ್ರಿತವಾಗದೆ ಇಡೀ ನಾಡಿನ ಭೌಗೋಲಿಕ ವ್ಯಾಪ್ತಿಯನ್ನು ಒಳಗೊಂಡಿರಬೇಕು. ದ್ವೇಷ ಕೇಂದ್ರಿತವಾಗದೆ ಪ್ರೀತಿ, ವಿಶ್ವಾಸ, ಹೃದಯವಂತಿಕೆಗಳ ನೆಲೆಯಲ್ಲಿ ನಡೆಯುವ ಮಾನವೀಯ ಚಳವಳಿಯಾಗಬೇಕು ಎಂದು ಚಂಪಾ ಪ್ರತಿಪಾದಿಸಿದರು. ನಾಡಿನ ಸಮಷ್ಟಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿದ್ಯಮಾನವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ, ಸಮಸ್ಯೆಗಳ ಸೂಕ್ತ ಪರಿಹಾರಕ್ಕಾಗಿ ಸುಸಂಘಟಿತ ಪ್ರಯತ್ನವಾಗಿ, ಎಲ್ಲ ಸಮುದಾಯಗಳ ಪಾಲುಗಾರಿಕೆಯನ್ನು ಪಡೆದುಕೊಳ್ಳುವ ಸಮಗ್ರ ಆಂದೋಲನವಾಗಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷರು ಹೇಳಿದರು

Facebook Comments

Sri Raghav

Admin