6 ತಿಂಗಳ ಮುನ್ನವೇ ಸಿದ್ಧವಾಯ್ತು ಜೆಡಿಎಸ್‍ನ 150 ಅಭ್ಯರ್ಥಿಗಳ ಪಟ್ಟಿ, ಸ್ವಂತ ಬಲದಿಂದ ಅಧಿಕಾರ ಎಂದ ಹೆಚ್.ಡಿ.ಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬಸವ ಕಲ್ಯಾಣ, ನ.25- ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವವರ ಹೆಸರು ಅಂತಿಮಗೊಳ್ಳುತ್ತಿದ್ದು, ಸದ್ಯದಲ್ಲೇ 140 ರಿಂದ 150 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಬಸವ ಕಲ್ಯಾಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರಾದ ದೇವೇಗೌಡರ ಅನುಮತಿ ಪಡೆದು ಆದಷ್ಟು ಶೀಘ್ರದಲ್ಲೇ ಈ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ನಾವು ಯಾವುದೇ ಪಕ್ಷದ ಜತೆ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸುವ ಪ್ರಮೇಯವೇನು ಇಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಗುಡುಗಿದ ಅವರು, ಜನರ ಆಶೀರ್ವಾದ ಪಡೆದು ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುವ ಶಕ್ತಿ ನಮಗಿದೆ ಎಂದು ವಿಶ್ವಾಸದಿಂದ ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ, ಕೃಷಿಕರ ಬದುಕಿನ ಜತೆ ಚಲ್ಲಾಟವಾಡುತ್ತಿವೆ. ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ರೈತರ ಅಭಿವೃದ್ಧಿ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಬರುತ್ತಿಲ್ಲ ಎಂಬ ಭಾವನೆ ಬರುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಯಿಂದ ಸಾಕಷ್ಟು ಬೆಳೆ ಹಾಳಾಗಿದೆ. ಸರಿಯಾದ ಬೆಂಬಲ ಬೆಲೆ ಕೊಡಲು ಈ ಎರಡೂ ರಾಷ್ಟ್ರೀಯ ಪಕ್ಷಗಳು ಸಬೂಬು ಹೇಳುತ್ತಿವೆ ಎಂದು ದೂರಿದರು. ಕೇಂದ್ರದ ಫಸಲ್ ಭೀಮಾ ಯೋಜನೆ ರೈತರಿಗೆ ಅನುಕೂಲವಾಗಿಲ್ಲ. ನರೇಂದ್ರಮೋದಿಯವರು ಇನ್ಸುರೆನ್ಸ್ ಕಂಪೆನಿಗಳ ಉದ್ಧಾರಕ್ಕೆ ನಿಂತಿದ್ದಾರೆಯೇ ಹೊರತು ರೈತರ ಪರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕಾರ್ಖಾನೆಗಳು ರೈತರಿಗೆ ಹಣ ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಸದಸ್ಯರೇ ಸರಿಯಾಗಿ ಭಾಗಿಯಾಗಿರಲಿಲ್ಲ. ಇದಕ್ಕೆ ಈ ಸರ್ಕಾರ ಶಾಸಕರಿಗೆ ಸರಿಯಾದ ಗೌರವ ಕೊಡುತ್ತಿಲ್ಲ, ವಿಶ್ವಾಸವಿಟ್ಟುಕೊಂಡಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ಆಕ್ಷೇಪಿಸಿದರು.ಈ ಬಾರಿಯ ಅಧಿವೇಶನ ಸರಿಯಾಗಿ ನಡೆದಿಲ್ಲ. 10 ದಿನಗಳಲ್ಲಿ ನಾಲ್ಕೈದು ದಿನ ಕಲಾಪ ವ್ಯರ್ಥವಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಸರಿಯಾಗಿ ಚರ್ಚೆಯೇ ಆಗಲಿಲ್ಲ. ಕೇವಲ ನಾಲ್ಕೈದು ಮಂದಿ ಮಾತ್ರ ಈ ಭಾಗದ ಶಾಸಕರು ಭಾಗವಹಿಸಿದ್ದರು ಎಂದು ಹೇಳಿದರು.

ಕನ್ನಡಕ್ಕೆ ಅವಮಾನ: ಬಿಎಂಐಸಿ ಯೋಜನೆ ಬಗ್ಗೆ ಸದನ ಸಮಿತಿ ವರದಿ ಕೊಟ್ಟು ಒಂದು ವರ್ಷವಾಗಿದೆ. ವರದಿ ಕನ್ನಡದಲ್ಲಿದೆ. ಆದರೆ, ನೈಸ್ ಕಂಪೆನಿಯ ಮುಖ್ಯಸ್ಥರು ತಮಗೆ ಕನ್ನಡ ಬರುವುದಿಲ್ಲ. ಇಂಗ್ಲಿಷ್‍ನಲ್ಲಿ ಕೊಡಿ ಎಂದು ಹೇಳಿದ್ದಾರೆ. ಇದಕ್ಕೆ ಮಣೆ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡವನ್ನೇನು ಆ ಕಂಪೆನಿಯ ಮುಖ್ಯಸ್ಥರಿಗೆ ಅಡವಿಟ್ಟಿದ್ದಾರೆಯೇ ಎಂದು ವಾಗ್ದಾಳಿ ನಡೆಸಿದರು.
ಟೋಲ್‍ನಲ್ಲಿ ಅವ್ಯವಹಾರ ನಡೆಯುತ್ತಿದೆಯಲ್ಲ ಎಂಬ ವರದಿಗಾರರ ಪ್ರಶ್ನೆಗೆ, ಟೋಲ್‍ನಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಈ ಸರ್ಕಾರಕ್ಕೆ ಆಗಿಲ್ಲ. ಇದನ್ನು ನೋಡಿದರೆ ಈ ಸರ್ಕಾರವೂ ಅದರಲ್ಲಿ ಶಾಮೀಲಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ಬಸವ ಕಲ್ಯಾಣ 12ನೆ ಶತಮಾನದಲ್ಲಿ ಬಾಳಿ ಬದುಕಿದ ಬಸವಣ್ಣನವರು ಬಾಳಿದ್ದ ಪವಿತ್ರ ಪುಣ್ಯ ಸ್ಥಳ. ನಾನು ಹೈದರಾಬಾದ್ ಕರ್ನಾಟಕ ಪ್ರವಾಸವನ್ನು ಈ ಪವಿತ್ರ ಸ್ಥಳದಿಂದಲೇ ಪ್ರಾರಂಭಿಸುತ್ತೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು. ಬಸವ ಕಲ್ಯಾಣ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲಾಗಿದೆ. ಇದುವರೆಗೆ ಈ ನಗರದ ಅಭಿವೃದ್ಧಿಗೆ 74 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇದನ್ನು ರಾಷ್ಟ್ರದಲ್ಲೇ ಪವಿತ್ರ ಯಾತ್ರಾ ಸ್ಥಳವನ್ನಾಗಿ, ಪ್ರವಾಸಿ ತಾಣವನ್ನಾಗಿ ಮಾಡಬಹುದು. ಆದರೆ, ಈ ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಲ್ಲಿ ಸರ್ಕಾರಗಳು ಸಣ್ಣತನ ತೋರಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಕೆಲವು ಭಾಗಗಳಲ್ಲಿ ಮೂಲಭೂತ ಸೌಕರ್ಯವೇ ಇಲ್ಲ. ಇದನ್ನು ಕಲ್ಪಿಸಲು ಸರ್ಕಾರಕ್ಕೆ ಆಸಕ್ತಿಯೂ ಇಲ್ಲ. ರಸ್ತೆ ಅಗಲೀಕರಣಕ್ಕೆ ಮನೆಗಳನ್ನು ಒಡೆಯಲಾಗಿದೆ. ಸುಮಾರು 600 ಮಂದಿಗೆ ನಿವೇಶನ ಕೊಟ್ಟಿದ್ದಾರೆಯೇ ಹೊರತು ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿಲ್ಲ. ನಾನೇ ಖುದ್ದಾಗಿ ಸಂಬಂಧಪಟ್ಟ ಮಂತ್ರಿಗಳಿಗೆ ದೂರವಾಣಿಯಲ್ಲಿ ರಿಕ್ವೆಸ್ಟ್ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದರು.

Facebook Comments

Sri Raghav

Admin