ಗುತ್ತಿಗೆ ಮಾಫಿಯಾದಿಂದ ಪೌರಕಾರ್ಮಿಕರನ್ನು ರಕ್ಷಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

KJ-02

ಬೆಂಗಳೂರು,ನ.27-ಕಸ ವಿಲೇವಾರಿ ಗುತ್ತಿಗೆ ಮಾಫಿಯಾದಿಂದ ಪೌರಕಾರ್ಮಿಕರನ್ನು ರಕ್ಷಣೆ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು. ಬಿಬಿಎಂಪಿ ಗಾಜಿನ ಮನೆಯಲ್ಲಿ ಪೌರಕಾರ್ಮಿಕರ ಮಹಾಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಕೆಲ ಗುತ್ತಿಗೆದಾರರು ಪೌರಕಾರ್ಮಿಕರನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಸರಿಯಾದ ವೇತನ ನೀಡುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಪೌರಕಾರ್ಮಿಕರ ಗುತ್ತಿಗೆ ಪದ್ದತಿಯನ್ನು ತೆಗೆದು ಎಲ್ಲರಿಗೂ ಪಾಲಿಕೆಯಿಂದಲೇ ನೇರ ವೇತನ ನೀಡಲಾಗುತ್ತದೆ. ಕನಿಷ್ಟ ವೇತನ 17 ಸಾವಿರ ನೀಡಲಾಗುತ್ತಿದೆ.

ಇದಕ್ಕೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದರು. ನಗರದಲ್ಲಿರುವ ಸುಮಾರು 25 ಸಾವಿರ ಪೌರಕಾರ್ಮಿಕರಲ್ಲಿ ಶೇ.40ರಷ್ಟು ಪೌರಕಾರ್ಮಿಕರು ಬಯೋಮೆಟ್ರಿಕ್ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಉಳಿದ ಶೇ.60ರಷ್ಟು ಕಾರ್ಮಿಕರು ಅನುಸರಿಸುತ್ತಿಲ್ಲ. ಎಲ್ಲರೂ ಬಯೋಮೆಟ್ರಿಕ್ ವ್ಯಾಪ್ತಿಗೆ ಒಳಪಡಬೇಕು ಎಂದರು.  ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಎಲ್ಲರಿಗೂ ಸಮಾನ ಮೂಲಭೂತ ಸೌಲಭ್ಯ ದೊರಕಬೇಕು. ಈ ಹಿಂದೆ ಮೇಯರ್ ಆಗಿದ್ದ ಜಿ.ಪದ್ಮಾವತಿ ಅವರು ಪೌರಕಾರ್ಮಿಕರಿಗೆ ಬಿಸಿಯೂಟ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಈಗ ಸಂಪತ್‍ರಾಜ್ ಅವರು ಕೂಡ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರು ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ಕಡ್ಡಾಯವಾಗಿ ಕನ್ನಡ ಓದಲು, ಬರೆಯಲು ಕಲಿಯಬೇಕು. ವಿವಿಧ ಕೆಲಸ ಹಾಗೂ ಹಲವಾರು ಕಾರಣಗಳಿಂದ ವಿವಿಧ ರಾಜ್ಯ ಹಾಗೂ ದೇಶಗಳಿಂದ ಹಲವಾರು ಜನರು ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಮಾತೃಭಾಷೆ ಯಾವುದೇ ಇರಲಿ ಮೊದಲು ಕನ್ನಡ ಭಾಷೆಯನ್ನು ಕಲಿಯಬೇಕು. ಆಗ ಮಾತ್ರ ಕನ್ನಡದ ಸಂಸ್ಕøತಿ ಅರಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮೇಯರ್ ಸಂಪತ್‍ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಯುಕ್ತ ಮಂಜುನಾಥ್ ಪ್ರಸಾದ್, ಸಂಘದ ಅಧ್ಯಕ್ಷ ನಾರಾಯಣ್ ಮುಂತಾದವರಿದ್ದರು.

Facebook Comments

Sri Raghav

Admin