ಚುನಾವಣೆಗೆ ರಣತಂತ್ರ ಹೆಣೆಯಲು ಡಿ.5 ರಿಂದ 3ದಿನ ಕಾಂಗ್ರೆಸ್ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Congress-01

ಬೆಂಗಳೂರು, ನ.27- ಮುಂದಿನ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಸಂಬಂಧ ಡಿಸೆಂಬರ್ 5ರಿಂದ ಮೂರು ದಿನಗಳ ಕಾಲ ಕೆಪಿಸಿಸಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದೆ. ಎಐಸಿಸಿ ಪ್ರಧಾನಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ದಿನೇಶ್‍ಗುಂಡೂರಾವ್, ಎಸ್.ಆರ್.ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಚುನಾವಣಾ ಕಾರ್ಯತಂತ್ರ ಡಿ.15ರಿಂದ ಜನವರಿ 15ರವರೆಗೆ ಕೈಗೊಳ್ಳಲಿರುವ ಯಾತ್ರೆಯ ರೂಪುರೇಷೆ ಸಂಬಂಧ ಚರ್ಚೆ ನಡೆಸಲಿದ್ದಾರೆ.

ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ಕಾಂಗ್ರೆಸ್ ರಾಜ್ಯಾದ್ಯಂತ ಜನಾಶೀರ್ವಾದ ಯಾತ್ರೆ ನಡೆಸಲು ತೀರ್ಮಾನಿಸಿದೆ. ಏಕಕಾಲದಲ್ಲಿ ರಾಜ್ಯದ ನಾಲ್ಕು ದಿಕ್ಕುಗಳಿಂದ ಯಾತ್ರೆ ಪ್ರಾರಂಭಿಸುವ ಸಂಬಂಧ ಚಿಂತನೆ ನಡೆಸಿದ್ದು, ಈ ಸಂಬಂಧ ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಯಾತ್ರೆಯ ರೂಪುರೇಷೆಗಳು ಕೂಡ ಸಿದ್ಧವಾಗಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ನಾಲ್ಕು ವಿಭಾಗಗಳ ಮುಖಂಡರೊಂದಿಗೆ ಸಭೆ ನಡೆಸಿ ಯಾವ ರೀತಿ ಯಾತ್ರೆ ನಡೆಸಬೇಕು , ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ಹೇಗೆ ಜನರನ್ನು ತಲುಪಬೇಕು, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಹೇಗೆ ಮುಟ್ಟಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ. ಚುನಾವಣೆಗೆ ನಡೆದಿರುವ ತಯಾರಿ, ನಡೆಬೇಕಾಗಿರುವ ತಯಾರಿಯ ಕುರಿತು ಪರಿಶೀಲಿಸಿ ವೇಣುಗೋಪಾಲ್ ಅವರು ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ.

ಮನೆಮನೆಗೆ ಕಾಂಗ್ರೆಸ್ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷ ಈಗ ಮತ್ತೊಂದು ತಯಾರಿಯನ್ನು ನಡೆಸುತ್ತಿದೆ. ರ್ಯಾಲಿ, ಬಹಿರಂಗ ಸಮಾವೇಶಗಳು, ಯಾತ್ರೆಗಳನ್ನು ನಡೆಸಲು ತೀರ್ಮಾನಿಸಿದೆ. ಯಾತ್ರೆಗಳ ಸ್ವರೂಪ ಯಾವ ರೀತಿ ಇರಬೇಕು ಎಂಬುದನ್ನು ಚಿಂತನ ಮಂಥನ ಸಭೆ ನಿರ್ಧರಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಯಾತ್ರೆ ನಡೆಯಲಿದೆ ಎಂದು ನಿರ್ಧರಿಸಲಾಗಿದೆ. ಇದರ ಸ್ವರೂಪ ಇನ್ನೂ ನಿರ್ಧಾರವಾಗಿಲ್ಲ. ನಾಲ್ಕು ದಿಕ್ಕಿನಿಂದ ಏಕಕಾಲದಲ್ಲಿ ಯಾತ್ರೆ ಕೈಗೊಳ್ಳಬೇಕೆ ಅಥವಾ 224 ಕ್ಷೇತ್ರಗಳಲ್ಲಿ ದಿನಕ್ಕೆ ಮೂರು ಕ್ಷೇತ್ರದಂತೆ ಯಾತ್ರೆ ಕೈಗೊಳ್ಳಬೇಕೆ ಎಂಬ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಿದ್ದಾರೆ.

Facebook Comments

Sri Raghav

Admin