ಪೊಲೀಸ್ ಠಾಣೆ ಸಮೀಪದಲ್ಲೇ ಕಾರ್ಪೊರೇಟರ್ ಕಾರು ಜಖಂಗೊಳಿಸಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Car--02

ಬೆಂಗಳೂರು, ನ.27- ಕುಡಿದು ಬಂದ ಮೂವರು ಕಿಡಿಗೇಡಿಗಳು ಪೊಲೀಸ್ ಠಾಣೆ ಪಕ್ಕದಲ್ಲೇ ಕಾರ್ಪೊರೇಟರ್ ಕಾರು ಸೇರಿದಂತೆ 8ಕ್ಕೂ ಹೆಚ್ಚು ವಾಹನಗಳನ್ನು ಕಲ್ಲಿನಿಂದ ಜಜ್ಜಿ ಜಖಂಗೊಳಿಸಿರುವ ಘಟನೆ ನಂದಿನಿಬಡಾವಣೆಯಲ್ಲಿ ನಡೆದಿದೆ. ನಂದಿನಿಬಡಾವಣೆ ಕಾರ್ಪೊರೇಟರ್ ರಾಜೇಂದ್ರಕುಮಾರ್ ಅವರಿಗೆ ಸೇರಿದ ಕಾರಿನ ಗಾಜನ್ನು ಕೈಯಿಂದ ಗುದ್ದಿ ಪುಡಿ ಮಾಡಿರುವ ದುಷ್ಕರ್ಮಿಗಳು ಪಕ್ಕದ ಮನೆಗಳ ಮುಂದೆ ನಿಂತಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ.

ರಾತ್ರಿ ಕುಡಿದು ಬಂದ ಮೂವರು ದುಷ್ಕರ್ಮಿಗಳು ಕಾರುಗಳನ್ನು ಜಖಂಗೊಳಿಸುತ್ತಿರುವ ಶಬ್ಧ ಕೇಳಿ ಹೊರ ಬಂದ ರಾಜೇಂದ್ರಕುಮಾರ್ ಅವರನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಕಲ್ಲಿನಿಂದ ಕಾರುಗಳನ್ನು ಜಜ್ಜಿರುವುದು, ಕೈಯಿಂದ ಗ್ಲಾಸ್ ಒಡೆದಿರುವುದು ಹಾಗೂ ಸ್ಥಳದಲ್ಲಿ ರಕ್ತ ಚೆಲ್ಲಿರುವ ದೃಶ್ಯಾವಳಿಗಳು ಕಾರ್ಪೊರೇಟರ್ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮೆರಾದ ಪುಟೇಜನ್ನು ರಾಜೇಂದ್ರಕುಮಾರ್ ಅವರು ಪೊಲೀಸರಿಗೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ನಂದಿನಿಬಡಾವಣೆ ಎರಡು ಪೊಲೀಸ್ ಠಾಣೆಗಳ ಸರಹದ್ದಿಗೆ ಬರುವುದರಿಂದ ಈ ಭಾಗದಲ್ಲಿ ಕಿಡಿಗೇಡಿಗಳ ದಾಂಧಲೆ ಹೆಚ್ಚಾಗಿದೆ. ಹೀಗಾಗಿ ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಅವರು ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಕಾರ್ಪೊರೇಟರ್ ರಾಜೇಂದ್ರಕುಮಾರ್ ಈ ಸಂಜೆಗೆ ತಿಳಿಸಿದರು. ನಿನ್ನೆಯಷ್ಟೇ ನಂದಿನಿ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಕೆ.ಗೋಪಾಲಯ್ಯ, ಮಾಜಿ ಉಪಮಹಾಪೌರ ಎಸ್.ಹರೀಶ್, ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜ್ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು. ಕಾರ್ಯಕ್ರಮ ನಡೆದ ರಾತ್ರಿಯೇ ದುಷ್ಕರ್ಮಿಗಳು ಕಾರ್ಪೊರೇಟರ್‍ಗೆ ಸೇರಿದ ಕಾರನ್ನು ಜಖಂಗೊಳಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Facebook Comments

Sri Raghav

Admin