ಯಡಿಯೂರಪ್ಪ ಜೊತೆ ಯತ್ನಾಳ್ ಗೌಪ್ಯ ಮಾತುಕತೆ, ಬಿಜೆಪಿ ಸೇರುವುದು ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

Yatnal--02

ವಿಜಯಪುರ,ನ.27-ನನಗೆ ಪಕ್ಷ ಸೇರಲು ದೆಹಲಿ ಮತ್ತು ಬೆಂಗಳೂರಿನಿಂದ ಅನುಮತಿ ಬಂದಿದೆ. ಶೀಘ್ರದಲ್ಲೇ ಇದು ಈಡೇರಲಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತವನ್ನು ಹೊರ ಹಾಕಿದ್ದಾರೆ.
ಇಂದು ಬೆಳಗ್ಗೆ ಇಲ್ಲಿನ ಐಬಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದ ನಂತರ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ದವಾಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ನನಗೆ ಬಿಜೆಪಿ ಸೇರಲು ಹಿಂದೆಯೇ ದೆಹಲಿಯಿಂದ ಹಾಗೂ ಬೆಂಗಳೂರಿನಿಂದ ಅನುಮತಿ ದೊರೆತಿತ್ತು. ಆದರೆ ಹುಬ್ಬಳ್ಳಿ ಕಡೆಯವರು ಮಾತ್ರ ಇದನ್ನು ಒಪ್ಪುತ್ತಿಲ್ಲ. ಸದ್ಯದಲ್ಲೇ ಅವರಿಗೂ ಈ ಸಂದೇಶ ರವಾನೆಯಾಗಲಿದೆ. ಶೀಘ್ರದಲ್ಲೇ ಕಾರ್ಯಕರ್ತರ ಆಸೆ ಈಡೇರಲಿದೆ. ಬಿಜೆಪಿ ಸೇರ್ಪಡೆ ಖಚಿತ ಎಂದರು.
ನಾನು ಕೆಲವು ಕಾರಣಾಂತರಗಳಿಂದ ಪಕ್ಷ ಬಿಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅವೆಲ್ಲವೂ ಮುಗಿದ ಅಧ್ಯಾಯ ನನ್ನ ಸೇರ್ಪಡೆಗೆ ಬಿಜೆಪಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದು ಯಾವ ಕಾರಣಕ್ಕೆ ಎಂಬುದು ನನಗೂ ತಿಳಿದಿಲ್ಲ. ಸದ್ಯದಲ್ಲೇ ಎಲ್ಲ ಗೊಂದಲಗಳು ಪರಿಹಾರವಾಗಲಿವೆ ಎಂದು ಹೇಳಿದರು.

ಉಚ್ಛಾಟನೆ ಹಿಂಪಡೆಯುವ ಸಾಧ್ಯತೆ:

ಇನ್ನು ಮೂಲಗಳ ಪ್ರಕಾರ ಯಡಿಯೂರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆ ವೇಳೆ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಿರುವುದನ್ನು ಹಿಂಪಡೆಯಬೇಕೆಂದು ಯತ್ನಾಳ್ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.  ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಯಡಿಯೂರಪ್ಪ ತಮ್ಮ ಉಚ್ಛಾಟನೆಯನ್ನು ಹಿಂಪಡೆಯಲಾಗುವುದು. ಪಕ್ಷಕ್ಕೆ ಯಾರೇ ವಿರೋಧ ವ್ಯಕ್ತಪಡಿಸಿದರೂ ಅವರನ್ನು ಸಮಾಧಾನಪಡಿಸಿ ಸೂಕ್ತ ಸಮಯದಲ್ಲಿ ನಿಮ್ಮನ್ನು ಸೇರ್ಪಡೆ ಮಾಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ಮಾಡಿದ್ದಾಗಿ ತಿಳಿದುಬಂದಿದೆ.

ಇದಕ್ಕೆ ಸಮ್ಮತಿಸಿದ ಯತ್ನಾಳ್, ನಾನು ಶಿವಸೇನೆ ಸೇರುತ್ತೇನೆ ಎಂಬುದು ಊಹಾಪೋಹ. ಮೊದಲಿನಿಂದಲೂ ಸಂಘ ಪರಿವಾರದಲ್ಲಿ ಬೆಳೆದು ಬಂದಿದ್ದೇನೆ. ನನಗೆ ಬೇರೆ ಪಕ್ಷ ಸರಿ ಹೋಗುವುದಿಲ್ಲ. ಬಿಜೆಪಿಗೆ ಸೇರ್ಪಡೆಯಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದ್ದು ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments

Sri Raghav

Admin