ಲಂಕಾ ವಿರುದ್ಧ ಭಾರತ ದಿಗ್ವಿಜಯ, ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Crick--02

ನಾಗ್ಪುರ, ನ. 27- ಟೀಂ ಇಂಡಿಯಾ ಬೌಲರ್‍ಗಳ ಸಾಂಘಿಕ ಹೋರಾಟದಿಂದ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಹಾಗೂ 239 ರನ್‍ಗಳಿಂದ ದಿಗ್ವಿಜಯ ಸಾಧಿಸಿದೆ. ಮೊದಲ ಟೆಸ್ಟ್ ನಲ್ಲಿ ಮಂದ ಬೆಳಕಿನಿಂದ ಸೋಲು ತಪ್ಪಿಸಿಕೊಂಡರೂ ಕೂಡ ಇಂದಿನ ಟೆಸ್ಟ್ ನಲ್ಲಿ ಸೋಲು ಕಂಡಿರುವ ಶ್ರೀಲಂಕಾ ಸರಣಿಯಲ್ಲಿ 1-0 ಯಿಂದ ಹಿನ್ನೆಡೆ ಅನುಭವಿಸಿದೆ.

ನಿನ್ನೆ ದಿನದಾಟಕ್ಕೆ 21 ರನ್‍ಗಳಿಗೆ ಒಂದು ವಿಕೆಟ್ ಕಳೆದುಕೊಂಡಾಗಲೇ ಸೋಲಿನ ಸುಳಿಗೆ ಸಿಲುಕಿದ್ದ ಲಂಕಾ ಇನ್ನಿಂಗ್ಸ್ ಸೋಲು ತಪ್ಪಿಸಲು ಹಪಹಪಿಸುತ್ತಿತ್ತು. ಆದರೆ ರವಿಚಂದ್ರನ್ ಅಶ್ವಿನ್ (4 ವಿಕೆಟ್) ಎದುರು ಕ್ರೀಸ್‍ನಲ್ಲಿ ನಿಲ್ಲಲಾಗದ ಲಂಕಾ ಬ್ಯಾಟ್ಸ್‍ಮನ್‍ಗಳು ಕೇವಲ 166 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ ವಿರಾಟ್ ಪಡೆ ಜಯದ ಕೇಕೆ ಹಾಕಿತು. ಭೋಜನ ವಿರಾಮಕ್ಕೂ ಮುನ್ನವೇ ಸೋಲಿನ ದವಡೆಗೆ ಸಿಲುಕಿದ್ದ ಚಾಂಡಿಮಾಲ್ ಪಡೆಗೆ 145ರನ್‍ಗಳಿಗೆ 8 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸಿತು.

ಚಾಂಡಿಮಲ್- ಲಕ್ಮಲ್ ಜೊತೆಯಾಟ ವ್ಯರ್ಥ:

ಮೇಲ್ಪಂಕ್ತಿಯ ಆಟಗಾರರೆಲ್ಲ 107 ರನ್‍ಗಳಾಗುವಷ್ಟರಲ್ಲೇ ಡಗ್‍ಔಟ್‍ನತ್ತ ಹೆಜ್ಜೆ ಇಟ್ಟಿದ್ದರೂ ಕೂಡ ನಾಯಕ ಚಾಂಡಿಮಲ್ ತನ್ನ ಜವಾಬ್ದಾರಿಯನ್ನು ಅರಿತು ಬ್ಯಾಟಿಂಗ್ ಮಾಡಿದರು. ಒಂಭತ್ತನೇ ವಿಕೆಟ್ ರೂಪದಲ್ಲಿ ಅಂಗಳಕ್ಕೆ ಇಳಿದ ಲಕ್ಮಲ್‍ರೊಡಗೂಡಿ ಭಾರತದ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದರು. ಈ ನಡುವೆಯೇ ಚಾಂಡಿಮಲ್ 10 ಬೌಂಡರಿಗಳ ನೆರವಿನಿಂದ 61 ರನ್‍ಗಳನ್ನು ಗಳಿಸಿದ್ದಾಗ ಉಮೇಶ್‍ಯಾದವ್ ಎಸೆದ ಚೆಂಡು ರವಿಚಂದ್ರನ್ ಅಶ್ವಿನ್ ಕೈಗಳಲ್ಲಿ ಸೆರೆ ಆಗುತ್ತಿದ್ದಂತೆ ಶ್ರೀಲಂಕಾ ಪಾಳೆಯದಲ್ಲಿ ಕಾರ್ಮೋಡ ಕವಿಯಿತು.

ಅಂತಿಮ ವಿಕೆಟ್ ರೂಪದಲ್ಲಿ ಕ್ರೀಸ್‍ಗೆ ಇಳಿದಿದ್ದ ಗಮಂಗೆ 9 ಎಸೆತಗಳನ್ನು ಎದುರಿಸಿದರು ಕೂಡ ಶೂನ್ಯ ಸಂಪಾದನೆ ಮಾಡಿ ರವಿಚಂದ್ರನ್ ಅಶ್ವಿನ್‍ರ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ಶ್ರೀಲಂಕಾ ಆಟಕ್ಕೆ ಇತಿಶ್ರೀ ಹಾಡಲಾಯಿತು. ನಾಯಕ ಚಾಂಡಿಮಲ್‍ರೊಂದಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಕ್ಮಲ್ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್‍ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಭಾರತ ತಂಡದ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಉಮೇಶ್‍ಯಾದವ್ ತಲಾ 2 ವಿಕೆಟ್‍ಗಳನ್ನು ಕೆಡವಿದರು.

ವಿರಾಟ್ ಕೊಹ್ಲಿ ತನ್ನ ನಾಯಕತ್ವದಲ್ಲಿ ಭಾರತದ ನೆಲದಲ್ಲಿ ಆಡಿದ ಇನ್ನಿಂಗ್ಸ್ ಗೆಲುವು ಇದಾಗಿದೆ. ಪಂದ್ಯದಲ್ಲಿ ದ್ವಿಶತಕ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಸ್ಕೋರ್ ವಿವರ: ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 205ರನ್, ದ್ವಿತೀಯ ಇನ್ನಿಂಗ್ಸ್ 166ರನ್
ಭಾರತ ಮೊದಲ ಇನ್ನಿಂಗ್ಸ್ 610/6 ಡಿಕ್ಲೇರ್ಡ್

Facebook Comments

Sri Raghav

Admin