ಜೈಲಿನಲ್ಲಿದ್ದರೂ ಶಶಿಕಲಾಗೆ ತಪ್ಪಿಲ್ಲ ‘ಐಟಿ’ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಚೆನ್ನೈ, ನ.28- ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ನಟರಾಜನ್ ಅವರ ನಿವಾಸಗಳು ಮತ್ತು ಕಂಪೆನಿಗಳ ಮೇಲೆ ಈ ತಿಂಗಳ ಆರಂಭದಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಇಂದು ಮತ್ತೆ ಚೆನ್ನೈ ಸೇರಿದಂತೆ ವಿವಿಧೆಡೆಗಳಲ್ಲಿರುವ ಅವರಿಗೆ ಸೇರಿದ ಮನೆಗಳು ಮತ್ತು ಪಾಲುದಾರಿಕೆ ಕಂಪೆನಿಗಳ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಶಶಿಕಲಾ ಅವರಿಗೆ ಸೇರಿದ ಚೆನ್ನೈ ನಗರದ ನುಂಗಂಬಾಕಂ, ರಾಯ್‍ಪೇಟ, ಸತ್ಯಂ ಸಿನಿಮಾಸ್, ಮಿಲ್ಕನ್ ಗ್ರೂಪ್ ಸೇರಿದಂತೆ ಸುಮಾರು 33 ಸ್ಥಳಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ದಾಳಿ ನಡೆದಿದೆ. ವಿ.ಕೆ.ಶಶಿಕಲಾ ಹಾಗೂ ಅವರ ಆಪ್ತ ಬಳಗದವರ ಹೆಸರಿನಲ್ಲಿ ಅನೇಕ ನಕಲಿ ಕಂಪೆನಿಗಳು ಅಕ್ರಮ ಹಣಕಾಸು ವ್ಯವಹಾರದಲ್ಲಿ ತೊಡಗಿದ್ದು, ನೂರಾರು ಕೋಟಿ ತೆರಿಗೆ ವಂಚಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗುತ್ತಿದೆ. ಶಶಿಕಲಾ ಅವರಿಗೆ ಸೇರಿದ ಸಕ್ಕರೆ ಕಾರ್ಖಾನೆಯೊಂದರಲ್ಲೂ ಕೂಡ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಎಲ್ಲ ವರದಿಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ ಮೊದಲ ವಾರದಲ್ಲಿ ನಡೆದಿದ್ದ ದಾಳಿಯ ಲೆಕ್ಕಪತ್ರಗಳ ಪರಿಶೀಲನೆ, ನಗದು ಎಣಿಕೆ ಕಾರ್ಯಗಳೇ ಸುಮಾರು ಎರಡು ವಾರಗಳ ಕಾಲ ನಡೆದಿದ್ದು, ಈ ವೇಳೆ ಸುಮಾರು 1430 ಕೋಟಿಗೂ ಹೆಚ್ಚಿನ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅದಾದ ನಂತರ ಇಂದು ಮತ್ತೆ ಈ ದಾಳಿ ನಡೆದಿದೆ. ಮನ್ನಾರ್‍ಗುಡಿ ಕುಟುಂಬದ ಆಸ್ತಿ ಪಾಸ್ತಿ ಮತ್ತು ನಗದು, ಬಂಗಾರ ಸೇರಿದಂತೆ ಸಾವಿರಾರು ಕೋಟಿ ರೂ. ಆಸ್ತಿಗಳು ಐಟಿ ಅಧಿಕಾರಿಗಳಿಗೆ ಬಗೆದಷ್ಟು ಸಿಗುತ್ತಲೇ ಇವೆ. ಶಶಿಕಲಾ ಅವರ ಆಸ್ತಿಯ ಮೌಲ್ಯ ಸುಮಾರು 5500 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.

ಇಂದು ನೂರಾರು ಐಟಿ ಅಧಿಕಾರಿಗಳ ಹಲವು ತಂಡಗಳು 31ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಇನ್ನೂ ಅನೇಕ ದಾಖಲೆ ಪತ್ರಗಳು, ಲ್ಯಾಪ್‍ಟಾಪ್‍ಗಳು, ಹಾಡ್‍ಡಿಸ್ಕ್‍ಗಳು, ಭೂಮಿ ಮತ್ತು ನಿವೇಶನಗಳ ನೋಂದಣಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin